ಅಹ್ಮದಾಬಾದ್: ಭಾರತ- ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ-20 ಸರಣಿಯ ಕೊನೆಯ ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ನಾಲ್ಕು ಪಂದ್ಯಗಳು ಮುಕ್ತಾಯವಾಗಿದ್ದು, ಎರಡು ತಂಡಗಳು 2-2 ಅಂತರದ ಸಮಬಲ ಸಾಧಿಸಿವೆ. ಇಂದಿನ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡಗಳು ಪಂದ್ಯ ಗೆದ್ದಿವೆ. ಆದರೆ ಟೀಮ್ ಇಂಡಿಯಾ, 4ನೇ ಪಂದ್ಯದಲ್ಲಿ ಟಾಸ್ ಸೋತರೂ ಕೂಡ 8 ರನ್‌ಗಳ ರೋಚಕ ಜಯ ದಾಖಲಿಸುವ ಮೂಲಕ ಸಮಬಲ ಸಾಧಿಸಿತ್ತು.
ಟಿ-20 ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟು ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ತಂಡಗಳು ಈ ಸರಣಿಯಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದವು. ಭಾರತ ತಂಡ ಪ್ರಮುಖವಾಗಿ ಆರಂಭಿಕ ಬ್ಯಾಟ್ಸ್‌ಮನ್‌ಗಳ ಪೈಕಿ ಹೆಚ್ಚು ಬದಲಾವಣೆ ತಂದು, ಯುವ ಆಟಗಾರರಿಗೆ ಮಣೆ ಹಾಕಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಕಟ್ಟುವ ಪ್ರಯತ್ನ ಮಾಡಿತ್ತು.
ಸರಣಿಯ ನಾಲ್ಕೂ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್. ರಾಹುಲ್ ತಮ್ಮ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆಡಿದ 4 ಪಂದ್ಯಗಳಲ್ಲಿ ಕ್ರಮವಾಗಿ 1, 0, 0 ಮತ್ತು 14 ರನ್ ಗಳಿಸಿರುವ ರಾಹುಲ್ ಅವರಿಗೆ ಕೊನೆಯ ಪಂದ್ಯದಲ್ಲೂ ಓಪನರ್ ಆಗಿ ಆಡುವ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಆದರೂ ಒಂದು ವೇಳೆ ಅವಕಾಶ ಸಿಕ್ಕು ವಿಫಲಗೊಂಡರೆ ಮುಂದಿನ ಸರಣಿಗಳಲ್ಲಿ ರಾಹುಲ್ ಓಪನರ್ ಆಗಿ ಆಡುವುದು ಅನುಮಾನ. ಓಪನರ್ ಸ್ಥಾನಕ್ಕಾಗಿ ಈಗಾಗಲೇ ಶಿಖರ್ ಧವನ್, ಯುವ ಪ್ರತಿಭೆ ಹಾಗೂ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ರೇಸ್ನಲ್ಲಿದ್ದಾರೆ.
ರೋಹಿತ್ ಶರ್ಮಾ ಭಾರತ ತಂಡದ ನಂ.1 ಆರಂಭಿಕ ಬ್ಯಾಟ್ಸ್‌ಮನ್, ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರು 15 ಮತ್ತು 12 ರನ್ ಮಾತ್ರವೇ ಗಳಿಸಿದ್ದು, ಸರಣಿಯ ಅಂತಿಮ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ಒತ್ತಡದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ಗೆ ಅಚ್ಚರಿಯ ಅವಕಾಶ ಸಿಕ್ಕಿತ್ತು. ಇಶಾನ್ ಕಿಶನ್ ಸ್ನಾಯು ಸೆಳೆತಕ್ಕೆ ಒಳಗಾದ ಕಾರಣ ಸೂರ್ಯಕುಮಾರ್ ಯಾದವ್‌ಗೆ ಚಾನ್ಸ್ ಸಿಕ್ಕಿತ್ತು. ಸೂರ್ಯಕುಮಾರ್ಗೆ 3ನೇ ಕ್ರಮಾಂಕದಲ್ಲಿ ಆಡಲು ವಿರಾಟ್ ಕೊಹ್ಲಿ ತಮ್ಮ ಸ್ಥಾನವನ್ನ ಬಿಟ್ಟುಕೊಟ್ಟಿದ್ದರು. ಸಿಕ್ಕ ಅವಕಾಶವನ್ನ ಸರಿಯಾಗಿ ಉಪಯೊಗಿಸಿಕೊಂಡ ಸೂರ್ಯಕುಮಾರ್, ಅರ್ಧಶತಕ ಗಳಿಸಿ ಮಿಂಚಿದ್ದರು. ಇಂದು ಕೂಡ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದ್ದು, ಅವರು 3ನೇ ಕ್ರಮಾಂಕದಲ್ಲೆ ಬ್ಯಾಟ್ ಬೀಸಲಿದ್ದಾರೆ.
ಈ ನಡುವೆ ನಾಲ್ಕನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ನಾಯಕ ವಿರಾಟ್ ಕೊಹ್ಲಿ ಕೂಡ ಸ್ನಾಯು ಸೆಳೆತಕ್ಕೆ ತುತ್ತಾಗಿದ್ದಾರೆ. ಇದೇ ಕಾರಣಕ್ಕೆ ಇನ್ನಿಂಗ್ಸ್ನ ಅಂತ್ಯದ ಓವರ್‌ಗಳಲ್ಲಿ ಅವರು ಫೀಲ್ಡ್‌ನಿಂದ ಹೊರಗುಳಿದು, ತಂಡವನ್ನು ಮುನ್ನಡೆಸುವ ಜವಾಬ್ದಾರಿ ರೋಹಿತ್ ಶರ್ಮಾಗೆ ವಹಿಸಿದ್ದರು. ಗಾಯದ ಸಮಸ್ಯೆ ಏನಾದರೂ ಕೊಂಚ ಗಂಭೀರವಾಗಿದ್ದರೆ, ಐದನೇ ಟಿ20ಯಲ್ಲಿ ವಿರಾಟ್ ವಿಶ್ರಾಂತಿ ಪಡೆದು ರೋಹಿತ್‌ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ.
ಇನ್ನು ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ಜವಾಬ್ದಾರಿಯನ್ನ ಸರಿಯಾಗಿ ನಿಭಾಯಿಸುತ್ತಿದ್ದಾರೆ. ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ಕೂಡ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದಾರೆ.