ಮುಂಬೈ: ಕೋವಿಡ್ ಹಾವಳಿಯ ನಡುವೆ ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಚಾರ್ಟರ್ಡ್ ವಿಮಾನದಲ್ಲಿ ಇಂದು ಮುಂಜಾನೆ ಇಂಗ್ಲೆಂಡ್‌ಗೆ ಹೊರಟಿವೆ. ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ತಂಡಗಳು ಒಟ್ಟಿಗೆ ಪ್ರಯಾಣ ಬೆಳೆಸಿವೆ.
ಮುಂಬೈ ವಿಮಾನ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ಹಾಗೂ ಮಹಿಳಾ ಕ್ರಿಕೆಟಿಗರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರ ಫೋಟೋಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಎರಡೂ ತಂಡಗಳ ಆಟಗಾರರು ಲಂಡನ್‌ಗೆ ಆಗಮಿಸಿದ ಬಳಿಕ ಸೌತಾಂಪ್ಟನ್‌ಗೆ ತೆರಳಲಿದ್ದು, ಅಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸೌತಾಂಪ್ಟನ್‌ನಲ್ಲಿ ಅವರು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಆಯ್ಕೆಯಾಗಿರುವುದಕ್ಕೆ ಕೊಹ್ಲಿ ಸಂತಸ ವ್ಯಕ್ತಪಡಿಸಿ ಮಾತನಾಡಿರುವ ವಿಡಿಯೋವನ್ನು ಸಹ ಬಿಸಿಸಿಐ ತನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದೆ.