ಅಹ್ಮದಾಬಾದ್ : ಟೆಸ್ಟ್ ಸರಣಿ ವಶಪಡಿಸಿಕೊಂಡು ಬೀಗಿರುವ ಭಾರತ ತಂಡ ಇಂದಿನಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ-20 ಸರಣಿಯ ಮೇಲೆ ಕಣ್ಣಿಟ್ಟಿದೆ. ಟಿ-20 ಸರಣಿಗೆ ಸನ್ನದ್ಧವಾಗಿರುವ ಟೀಮ್ ಇಂಡಿಯಾ ತಂಡದಲ್ಲಿ ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೊದಲ ಪಂದ್ಯ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ವರ್ಷಾಂತ್ಯದಲ್ಲಿ ಟಿ-20 ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಎರಡೂ ತಂಡಗಳು ಈ ಪಂದ್ಯಾವಳಿಯನ್ನ ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳೊಂದಿಗೆ ಕಣಕ್ಕಿಳಿಯಲಿವೆ. ಭಾರತದಲ್ಲಿ ಏಕಕಾಲಕ್ಕೆ ಎರಡು ಸರಣಿಗಾಗುವಷ್ಟು ಪ್ರತಿಭಾನ್ವಿತ ಆಟಗಾರರ ಪಡೆಯೇ ಇದೆ. ಮುಂದಿನ ಐಪಿಎಲ್‌ನಲ್ಲಿ ಇನ್ನಷ್ಟು ಪ್ರತಿಭೆಗಳು ಬೆಳಕಿಗೆ ಬರಬಹುದು. ಹೀಗಾಗಿ ಸಿಕ್ಕ ಅವಕಾಶವನ್ನು ಗಟ್ಟಿಗೊಳಿಸಿಕೊಳ್ಳಲು ಇಲ್ಲಿ ಆರೋಗ್ಯಕರ ಪೈಪೋಟಿ ಕಂಡುಬರುವ ನೀರಿಕ್ಷೆಯಿದೆ.
ಓದಿ : ಧವನ್ಗಿಲ್ಲ ಅವಕಾಶ: ರೋಹಿತ್ ಜೊತೆ ಟಿ-20 ಓಪನರ್ ಆಗಿ ಕನ್ನಡಿಗ ರಾಹುಲ್!
ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಣಕ್ಕೆ ಇಳಿಯಬೇಕು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರೋಹಿತ್ ಶರ್ಮಾ ಅವರೊಂದಿಗೆ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಪಕ್ಕಾ ಎಂದು ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಖಚಿತ ಪಡಿಸಿದ್ದಾರೆ. ಹೀಗಾಗಿ ಧವನ್ ಸದ್ಯ 'ವೇಟಿಂಗ್ ಲಿಸ್ಟ್’ ನಲ್ಲಿ ಇರಬೇಕಾಗುತ್ತದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ ಯಾದವ್ ನಡುವೆ ಪೈಪೋಟಿ ಇದ್ದರೂ ಅನುಭವಿ ಅಯ್ಯರ್ ಅವರೇ ಮೊದಲ ಆಯ್ಕೆ ಎಂಬುದರಲ್ಲಿ ಅನುಮಾನವಿಲ್ಲ. ರಿಷಭ್ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೊಡಿಬಡಿ ಆಟದ ಮೂಲಕ ಕೆಳ ಕ್ರಮಾಂಕದಲ್ಲಿ ಸಿಡಿಯಬಲ್ಲರು.
ಟಿ. ನಟರಾಜನ್ ಭುಜಕ್ಕೆ ಗಾಯವಾಗಿದ್ದು, ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ಟೀಮ್ ಇಂಡಿಯಾದ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗದ ನೇತೃತ್ವ ವಹಿಸಬೇಕಿದೆ. ಆಂಗ್ಲರು ಸ್ಪಿನ್ನಿಗೆ ಪರದಾಡುತ್ತಿರುವುದರಿಂದ ಚಹಲ್ ಜತೆಗೆ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಇಬ್ಬರೂ ದಾಳಿಗಿಳಿದರೆ ಅಚ್ಚರಿ ಇಲ್ಲ. ವೇಗದ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರಗೆ ಶಾರ್ದೂಲ್ ಠಾಕೂರ್ ಮತ್ತು ನವದೀಪ್ ಸೈನಿ ಸಾಥ್ ಕೊಡುವ ಸಾಧ್ಯತೆ ಇದೆ.
ಓದಿ : ನಾಳೆಯಿಂದ ಟಿ-20 ಫೈಟ್: ಹೊಸ ದಾಖಲೆಗಳ ಮೇಲೆ ವಿರಾಟ್, ರೋಹಿತ್ ಕಣ್ಣು
ಇನ್ನೂ ಟೆಸ್ಟ್ ಸರಣಿ ಸೋಲಿನಿಂದ ಕಂಗೆಟ್ಟಿರುವ ಆಂಗ್ಲರು ಟಿ-20 ಸರಣಿಯ ಮೇಲೆ ಕಣ್ಣಿಟ್ಟಿದ್ದಾರೆ. ಅನುಭವಿ ನಾಯಕ ಇಯಾನ್ ಮಾರ್ಗನ್ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದಲ್ಲಿ ಟಿ-20 ಸ್ಪೆಷಲಿಸ್ಟ್ಗಳ ದಂಡೆ ಇದೆ. ಜಾನಿ ಬೇರ್ ಸ್ಟೊ, ಜೋಸ್ ಬಟ್ಲರ್, ಚುಟುಕು ಕ್ರಿಕೆಟ್ನ ಸ್ಟಾರ್ ಆಟಗಾರ ಡೇವಿಡ್ ಮಲನ್, ರಾಯ್ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಆಟಗಾರರಾಗಿದ್ದಾರೆ. ಕರನ್ ಸಹೋದರರಲ್ಲಿ ಯಾರು ಕಣಕ್ಕೆ ಇಳಿಯುತ್ತಾರೆ ಎಂಬುದನ್ನು ನೋಡಬೇಕಿದೆ. ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಮಾರ್ಕ್ ವುಡ್, ಆದಿಲ್ ರಶೀದ್, ಮೊಯೀನ್ ಅಲಿ ಬೌಲಿಂಗ್ ವಿಭಾಗವನ್ನ ಮುನ್ನಡೆಸಲಿದ್ದಾರೆ.
ಸಂಭಾವ್ಯ ಭಾರತ ತಂಡ:ರೋಹಿತ್ ಶರ್ಮ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್/ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಸೈನಿ, ಯಜುವೇಂದ್ರ ಚಹಲ್.
ಸಂಭಾವ್ಯ ಇಂಗ್ಲೆಂಡ್ ತಂಡ: ಜಾಸನ್ ರಾಯ್, ಬಟ್ಲರ್, ಜಾನಿ ಬೈರ್ಸ್ಟೋವ್, ಡೇವಿಡ್ ಮಲನ್, ಇಯಾನ್ ಮಾರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಸ್ಯಾಮ್ ಕರನ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್/ಜೋಫ್ರ ಆರ್ಚರ್.