ಚೆನ್ನೈ:ಮೊದಲ ಇನ್ನಿಂಗ್ಸ್ನಲ್ಲಿ ರಿಷಬ್ ಪಂತ್ ದಂಡಿಸಿದ ಸಂದರ್ಭದಲ್ಲಿ ತಂಡದ ಆಟಗಾರರು ತುಂಬಿದ ಬಲವೇ ನನ್ನ ಪುನರಾಗಮನಕ್ಕೆ ಕಾರಣ ಎಂದು ಮೊದಲ ಟೆಸ್ಟ್ನಲ್ಲಿ ಭಾರತದ ವಿರುದ್ಧ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಹೇಳಿದರು.
ಎರಡನೇ ಇನ್ನಿಂಗ್ಸ್ನಲ್ಲಿ 26 ಓವರ್ ಎಸೆದ ಲೀಚ್, 76 ರನ್ ನೀಡಿ ಪ್ರಮುಖ 4 ವಿಕೆಟ್ಗಳನ್ನು ಪಡೆದು ಮಿಂಚಿದರು. ಆದರೆ, ಪ್ರಥಮ ಇನ್ನಿಂಗ್ಸ್ನಲ್ಲಿ ಲೀಚ್ ದುಬಾರಿ ಬೌಲರ್ ಎನಿಸಿಕೊಂಡರು. ಲೀಚ್ ಅವರ ಒಂದೇ ಓವರ್ನಲ್ಲಿ 3 ಸಿಕ್ಸರ್ ಸೇರಿ 5 ಸಿಕ್ಸರ್ ಪಂತ್ ಸಿಡಿಸಿ ಸವಾರಿ ಮಾಡಿದ್ದರು.
ಪಂತ್ ಅವರು ಟೆಸ್ಟ್ ಆಡುತ್ತಿದ್ದಾರೋ ಅಥವಾ ಐಪಿಎಲ್ ಆಡುತ್ತಿದ್ದಾರೋ ಎಂದು ಯೋಚಿಸಿದೆ. ಆದರೆ, ನನಗಂತೂ ಅದು ಸವಾಲಾಗಿ ಪರಿಣಮಿಸಿತು. ಸಹ ಆಟಗಾರರು ನನ್ನ ಬಳಿ ಬಂದು ಧೈರ್ಯ ತುಂಬಿದರು. ಅವರು ತುಂಬಿದ ಬಲವೇ ಎರಡನೇ ಇನ್ನಿಂಗ್ಸ್ನಲ್ಲಿ ಯಶಸ್ಸಿಗೆ ಕಾರಣ ಎಂದು ಹೇಳಿದರು.