ಅಹಮದಾಬಾದ್:ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಮೊದಲ ಟಿ -20 ಪಂದ್ಯದಲ್ಲಿ ಇಂಗ್ಲೆಂಡ್ ಭಾರತ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಐದು ಪಂದ್ಯಗಳ ಸರಣಿಯಲ್ಲಿ ಇಯಾನ್ ಮೋರ್ಗಾನ್ ನೇತೃತ್ವದ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದೆ.
ನಿನ್ನೆಯ ಪಂದ್ಯ ಸೋತ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟ್ರಿಕ್ಕಿ ಪಿಚ್ ಸವಾಲಿನ ಬಗ್ಗೆ ನಮಗೆ ಸುಳಿವೇ ಇರಲಿಲ್ಲ ಎಂದು ಹೇಳಿದ್ದಾರೆ.
ಎರಡು ಗತಿಯ ಪಿಚ್‌ನಲ್ಲಿ ಹೆಣಗಾಡಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿದರು. ಆದರೆ, ಟ್ರಿಕ್ಕಿ ಪಿಚ್ನ ಮರ್ಮ ಕಂಡುಕೊಂಡ ಇಂಗ್ಲೆಂಡ್ ತಂಡ, ಸುಲಭವಾಗಿ ಗುರಿ ಬೆನ್ನಟ್ಟಿ 15.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಗಳಿಸುವ ಮೂಲಕ ಭಾರತ ತಂಡವನ್ನ 8 ವಿಕೆಟ್ಗಳಿಂದ ಬಗ್ಗು ಬಡಿಯಿತು .
ತಮ್ಮನ್ನು ಸೇರಿ ಕೆ.ಎಲ್. ರಾಹುಲ್ ಮತ್ತು ಶಿಖರ್ ಧವನ್ ಕಳಪೆ ಹೊಡೆತಗಳಿಗೆ ವಿಕೆಟ್ ಒಪ್ಪಿಸಿದ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಕಳವಳ ವ್ಯಕ್ತಪಡಿಸಿದರು. "ಆ ಪಿಚ್‌ನಲ್ಲಿ ನಾವು ಏನು ಮಾಡಬೇಕೆಂಬುದರ ಬಗ್ಗೆ ನಮಗೆ ತಿಳಿದಿರಲಿಲ್ಲ, ನಮ್ಮ ಹೊಡೆತಗಳಲ್ಲಿ ಸಮರ್ಪಕತೆಯ ಕೊರತೆ ಇತ್ತು. ಆ ಬಗ್ಗೆ ನಾವು ಮುಂದಿನ ಪಂದ್ಯಗಳಲ್ಲಿ ಗಮನಹರಿಸಬೇಕಾಗಿದೆ. ನಮ್ಮ ದೋಷಗಳನ್ನು ಒಪ್ಪಿಕೊಂಡು, ಮತ್ತಷ್ಟು ಸುಧಾರಣೆ ಮೂಲಕ ಕಣಕ್ಕಿಳಿಯಬೇಕಿದೆ. ನಾವು ಬಯಸಿದ ಹೊಡೆತಗಳನ್ನು ಹೊಡೆಯಲು ಪಿಚ್ ನಮಗೆ ಅವಕಾಶ ನೀಡಲಿಲ್ಲ" ಎಂದು ಕೊಹ್ಲಿ ಹೇಳಿದರು.
ಓದಿ : ಕೊಹ್ಲಿ ಡಕ್ ಔಟ್ ಆಗಿದ್ದು ಹೆಲ್ಮೆಟ್ ಜಾಗೃತಿಯ ಸಂದೇಶವಾಯಿತು!
ಅರ್ಧ ಶತಕ ಸಿಡಿಸಿ ಭಾರತವು ಗೌರವಾನ್ವಿತ ಮೊತ್ತವನ್ನು ದಾಖಲಿಸಲು ನೆರವಾದ ಶ್ರೇಯಸ್ ಅಯ್ಯರ್ ತೋರಿದ ದೃಢತೆ ಬಗ್ಗೆ ಕೊಹ್ಲಿ ಹೊಗಳಿದರು. ಕ್ರೀಸ್ ಅನ್ನು ಹೇಗೆ ಬಳಸುವುದು ಮತ್ತು ಬೌನ್ಸ್ ನಿರ್ವಹಣೆ ಹೇಗೆ ಎಂಬುದನ್ನ ಶ್ರೇಯಸ್ ತೋರಿಸಿದ್ದಾನೆ. ನಾವು ಪಿಚ್ ಗತಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕಿದೆ ಎಂದಿದ್ದಾರೆ.
"ಪಿಚ್ ಅವಕಾಶ ನೀಡಿದರೆ, ಆಕ್ರಮಣಕಾರಿಯಾಗಿ ಆಡಬಹುದು. ಪಿಚ್ ಬಗ್ಗೆ ಅರಿಯಲು ನಾವು ಸಾಕಷ್ಟು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಶ್ರೇಯಸ್ ತಾಳ್ಮೆಯ ಆಟವಾಡಿ ಪಿಚ್ ಬಗ್ಗೆ ಅರಿತುಕೊಂಡರು. ಬೇಗ ಬೇಗನೆ ವಿಕೆಟ್ ಕಳೆದುಕೊಂಡಿದ್ದರಿಂದ 150-160ಕ್ಕೆ ಟಾರ್ಗೆಟ್ ನೀಡಲು ಸಾಧ್ಯವಾಗಲಿಲ್ಲ." ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.