ನವದೆಹಲಿ:ಭಾರತದಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಇದಕ್ಕೆ ಈಗಾಗಲೇ ಏಳು ತಂಡಗಳು ಕ್ವಾಲಿಫೈ ಆಗಿದೆ. ಐಸಿಸಿ ಲೀಗ್‌ನ ಅಂಕ ಪಟ್ಟಿ ನವೀಕರಣ ಆಗಿದ್ದು ಇಂಗ್ಲೆಂಡ್ ಪ್ರಥಮ ಸ್ಥಾನಕ್ಕೇರಿದೆ. ಏಕದಿನ ವಿಶ್ವಕಪ್ಗೂ ಮೊದಲು ಏಷ್ಯಾ ರಾಷ್ಟ್ರಗಳಿಗೆ ಪ್ರತಿಷ್ಠಿತ ಏಷ್ಯಾಕಪ್ ನಡೆಯಲಿದೆ. ಈ ಟ್ರೋಫಿಯನ್ನೂ ಏಕದಿನ ಮಾದರಿಯಲ್ಲಿ ನಡೆಸಲಾಗುವುದು ಎಂದು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ತಿಳಿಸಿದೆ. ಇನ್ನು ಏಷ್ಯಾಕಪ್ನ ಸ್ಥಳ ಗೊಂದಲದಲ್ಲಿದೆ. ಈ ಹಿಂದೆ ಪಾಕಿಸ್ತಾನ ಎಂದು ನಿರ್ಣಯಿಸಲಾಗಿತ್ತು. ಆದರೆ, ಭಾರತ ಪಾಕ್ಗೆ ಹೋಗಲು ನಿರಾಕರಿಸಿರುವುದರಿಂದ ತಟಸ್ಥ ತಳದಲ್ಲಿ ಆಯೋಜನೆ ಸಾಧ್ಯತೆ ಇದೆ.
ವಿಶ್ವಕಪ್ ಸೂಪರ್ ಲೀಗ್‌ನ ಎರಡನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಇಂಗ್ಲೆಂಡ್ ಮತ್ತೆ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ 155 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದೆ. 150 ಅಂಕ ಗಳಿಸಿರುವ ನ್ಯೂಜಿಲ್ಯಾಂಡ್ ತಂಡ ಎರಡನೇ ಸ್ಥಾನ ಕುಸಿದಿದೆ. ಅದೇ ವೇಳೆ 2ನೇ ಸ್ಥಾನದಲ್ಲಿದ್ದ ಭಾರತ (139 ಅಂಕ) ಮೂರನೇ ಸ್ಥಾನಕ್ಕೆ ತಲುಪಿದೆ. ಪಾಕಿಸ್ತಾನ 130 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 120 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅದೇ ಸಮಯದಲ್ಲಿ ಬಾಂಗ್ಲಾದೇಶ ಕೂಡ 120 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ 115 ಅಂಕಗಳೊಂದಿಗೆ ಏಳನೇ ಸ್ಥಾನಕ್ಕೆ ತಲುಪಿದೆ. ವೆಸ್ಟ್ ಇಂಡೀಸ್ 88 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ 78 ಮತ್ತು ಶ್ರೀಲಂಕಾ 77 ಅಂಕಗಳೊಂದಿಗೆ 9 ನೇ ಸ್ಥಾನದಲ್ಲಿದೆ.
ಇದಕ್ಕೂ ಮೊದಲು ಜನವರಿ 12, 2023 ರಂದು, ಕರಾಚಿಯಲ್ಲಿ ನಡೆದ ಎರಡನೇ ಏಕದಿನದಲ್ಲಿ ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿದ ನಂತರ ನ್ಯೂಜಿಲ್ಯಾಂಡ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಪಾಯಿಂಟ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿತ್ತು. ಅಂದಿನಿಂದ ನ್ಯೂಜಿಲ್ಯಾಂಡ್ ಅಗ್ರಸ್ಥಾನದಲ್ಲಿತ್ತು. ಇಂಗ್ಲೆಂಡ್, ನ್ಯೂಜಿಲ್ಯಾಂಡ್ , ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನೇರವಾಗಿ ವಿಶ್ವಕಪ್‌ಗೆ ಅರ್ಹತೆ ಪಡೆದಿವೆ.