ಲಂಡನ್ : ಭಾರತದಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭಕ್ಕೆ ದಿನ ಸಮೀಪಿಸುತ್ತಿದೆ. ವಿವಿಧ ಕ್ರಿಕೆಟ್ ತಂಡಗಳು ಮಹತ್ವದ ಟ್ರೋಫಿ ಗೆಲ್ಲಲು ಕಾತರಿಸುತ್ತಿವೆ. ಇಂಗ್ಲೆಂಡ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಲಿಷ್ಠ ತಂಡ ಕಟ್ಟಲು ತಯಾರಿ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ಆಟಗಾರನಿಗೆ ಮಣೆ ಹಾಕಲಾಗುತ್ತಿದೆ ಎನ್ನಲಾಗಿದೆ. ಆ ನಿವೃತ್ತ ಆಟಗಾರ ಬೇರಾರೂ ಅಲ್ಲ, ಅವರೇ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್. ಏಕದಿನ ತಂಡದ ನಾಯಕ ಜೋಸ್ ಬಟ್ಲರ್ ಅವರು ಸ್ಟೋಕ್ಸ್ಗೆ ಮತ್ತೆ ಏಕದಿನಕ್ಕೆ ಮರಳುವಂತೆ ಕೇಳಿಕೊಂಡಿದ್ದಾರಂತೆ.
2019ರ ಏಕದಿನ ವಿಶ್ವಕಪ್ ಮತ್ತು 2022ರ ಟಿ20 ವಿಶ್ವಕಪ್ನಲ್ಲಿ ಬೆನ್ ಸ್ಟೋಕ್ಸ್ ಅದ್ಭುತ ಆಲ್ರೌಂಡ್ ಪ್ರದರ್ಶನ ನೀಡಿದ್ದರು. ಬಟ್ಲರ್ ಏಕದಿನ ತಂಡಕ್ಕೆ ಸ್ಟೋಕ್ಸ್ ಬಲ ಕೇಳಿದ್ದಾರೆ ಎಂದು ಲಂಡನ್ನ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂಗ್ಲೆಂಡ್ ತಂಡಕ್ಕೆ ಸ್ಟೋಕ್ಸ್ ಆಡುವ ಬಗ್ಗೆ ಏಕದಿನ ತಂಡದ ಕೋಚ್ ಮ್ಯಾಥ್ಯೂ ಮೋಟ್ ಮಾಧ್ಯಮವೊಂದಕ್ಕೆ ತಿಳಿಸಿದರು. ಮುಂದಿನ ಮಂಗಳವಾರದ ವೇಳೆಗೆ ವಿಶ್ವಕಪ್ ತಂಡ ಪ್ರಕಟವಾಗುವ ಸಾಧ್ಯತೆ ಇದೆ.
"ಜೋಸ್ ಬಟ್ಲರ್ ಅವರು ಸ್ಟೋಕ್ಸ್ ಜೊತೆಗೆ ಮಾತನಾಡಿದ್ದಾರೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬೆನ್ ಒಪ್ಪಿಕೊಳ್ಳುವ ಭರವಸೆ ನಮ್ಮಲ್ಲಿದೆ. ಗಾಯದ ಸಮಸ್ಯೆಯಲ್ಲಿ ಇರುವುದರಿಂದ ಬೌಲರ್ ಆಗಿ ತಂಡದಲ್ಲಿ ಪಾಲ್ಗೊಳ್ಳದಿದ್ದರೂ ಬ್ಯಾಟರ್ ಆಗಿ ತಮ್ಮ ಕೊಡುಗೆ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ" ಎಂದು ಮ್ಯಾಥ್ಯೂ ಮೋಟ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆ್ಯಶಸ್ 2023ರಲ್ಲಿ ಸ್ಟೋಕ್ಸ್ ಉತ್ತಮ ಫಾರ್ಮ್‌ನಲ್ಲಿದ್ದರು. ಐದು ಪಂದ್ಯಗಳ ಸರಣಿಯನ್ನು 2-2ರಲ್ಲಿ ಇಂಗ್ಲೆಂಡ್ ಡ್ರಾ ಮಾಡಿಕೊಂಡಿತ್ತು. ಸ್ಟೋಕ್ಸ್ ಲಾರ್ಡ್ಸ್ ಟೆಸ್ಟ್‌ನಲ್ಲಿ ಎರಡು ಅರ್ಧಶತಕ ಮತ್ತು 155 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆ್ಯಶಸ್ನಲ್ಲಿ 45ರ ಸರಾಸರಿಯಲ್ಲಿ ಒಂಬತ್ತು ಇನ್ನಿಂಗ್ಸ್ ಮೂಲಕ 405 ರನ್ ಗಳಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ 4ನೇ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿದ್ದಾರೆ.