ನವದೆಹಲಿ:ಇಂಗ್ಲೆಂಡ್ ಕ್ರಿಕೆಟ್ ತಂಡದ ಆಪತ್ಬಾಂಧವ ಎಂದೇ ಗುರುತಿಸಿಕೊಂಡಿರುವ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ವಿದಾಯ ಹೇಳಿ ವರ್ಷವಾಗಿದೆ. ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಅವರು ಮರಳಿದ್ದಾರೆ ಎಂಬ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. 'ಏಕದಿನ ಮಾದರಿಗೆ ವಾಪಸ್ ಬರುವುದಿಲ್ಲ' ಎಂದು ಬೆನ್ ಅವರೇ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಬೆನ್, 'ತಾವು ಇನ್ನು ಏಕದಿನ ಮಾದರಿಗೆ ವಾಪಸ್ ಆಗುವುದಿಲ್ಲ. ದೀರ್ಘಕಾಲದಿಂದ ಮೊಣಕಾಲು ನೋವಿಗೆ ತುತ್ತಾಗಿದ್ದೇನೆ. ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಚಿಂತನೆ ಇದೆ. ನಿವೃತ್ತಿಯನ್ನು ವಾಪಸ್ ಪಡೆಯುವ ಪ್ರಮೇಯವೇ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಏಕದಿನ ಮಾದರಿಗೆ ಕಳೆದ ವರ್ಷವೇ ಗುಡ್ಬೈ ಹೇಳಿದ್ದೇನೆ. ಆಶಸ್ ಸರಣಿಯ 2 ನೇ ಪಂದ್ಯ ಮುಗಿದ ಬಳಿಕ ದೀರ್ಘ ರಜೆ ತೆಗೆದುಕೊಳ್ಳಲಿದ್ದೇನೆ. ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಇಂಗ್ಲೆಂಡ್ ತಂಡ ಮುಂದಿನ ವರ್ಷ ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅಲ್ಲಿಯವರೆಗೂ ದೀರ್ಘ ರಜೆ ಪಡೆಯಲಿದ್ದೇನೆ ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ನ್ಯೂಜಿಲ್ಯಾಂಡ್ ಪ್ರವಾಸದ ವೇಳೆ ಸ್ಟೋಕ್ಸ್ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದರು. ಇದು ಉಲ್ಬಣವಾಗಿ 2023 ರ ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕೇವಲ 2 ಪಂದ್ಯಗಳನ್ನು ಮಾತ್ರ ಆಡಿದ್ದರು. ಇತ್ತ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಸ್ಟೋಕ್ಸ್ ಗಾಯದ ಕಾರಣ ಬೌಲಿಂಗ್ ಮಾಡಲೂ ಸಾಧ್ಯವಾಗಿಲ್ಲ. ಸ್ಟಾರ್ ಆಲ್ರೌಂಡರ್ 4 ಪಂದ್ಯಗಳಲ್ಲಿ ಕೇವಲ 29 ಓವರ್ ಮಾತ್ರ ಎಸೆದಿದ್ದಾರೆ. ಹೆಡಿಂಗ್ಲಿ ಮತ್ತು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಬೌಲಿಂಗೇ ಮಾಡಿರಲಿಲ್ಲ. ಬ್ಯಾಟಿಂಗ್ನಲ್ಲಿ ನಾಯಕ ಮಿಂಚು ಹರಿಸುತ್ತಿದ್ದಾರೆ. 5 ಪಂದ್ಯಗಳ ಆಶಸ್ ಸರಣಿಯಲ್ಲಿ 2-1 ರಿಂದ ಹಿನ್ನಡೆ ಅನುಭವಿಸಿದೆ. ಜುಲೈ 27 ರಿಂದ ಕೊನೆಯ, 5ನೇ ಟೆಸ್ಟ್ ಆರಂಭವಾಗಿದೆ.
ಸ್ಟೋಕ್ಸ್ ಕ್ರಿಕೆಟ್ ಸಾಧನೆ :ಕಳೆದ ಏಕದಿನ ಮತ್ತು ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಆಧಾರವಾಗಿ ನಿಂತು ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಮಹತ್ವದ ಪಂದ್ಯಗಳಲ್ಲಿ ಆಲ್ರೌಂಡ್ ಆಟವಾಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟು ಆಪತ್ಬಾಂಧವನಾಗಿದ್ದರು.
ಸ್ಟಾರ್ ಆಲ್ರೌಂಡರ್ ಸ್ಟೋಕ್ಸ್ ಈವರೆಗೂ ಇಂಗ್ಲೆಂಡ್ ಪರವಾಗಿ 105 ಏಕದಿನ ಪಂದ್ಯವಾಡಿದ್ದು, 2924 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ, 21 ಅರ್ಧಶತಕಗಳಿವೆ. 43 ಟಿ20 ಪಂದ್ಯಗಳಲ್ಲಿ 585 ರನ್ ಗಳಿಸಿದ್ದಾರೆ. ಟೆಸ್ಟ್ ಮಾದರಿಯಲ್ಲಿ 96 ಪಂದ್ಯಗಳಾಡಿದ್ದು, 6072 ರನ್ ಮಾಡಿದ್ದಾರೆ. 13 ಶತಕ, 30 ಅರ್ಧಶತಕ ಬಾರಿಸಿದ್ದಾರೆ. ಪ್ರಸ್ತುತ ತಂಡದ ನಾಯಕರಾಗಿದ್ದಾರೆ.
ಇದನ್ನೂ ಓದಿ:ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಿಂದ ಹೊರಬಂದ ಮೊಹಮ್ಮದ್ ಸಿರಾಜ್: ಆರಂಭಕ್ಕೂ ಮುನ್ನ ಆಘಾತ!