ಲಂಡನ್ :ಇಂಗ್ಲೆಂಡ್ ಮಾಜಿ ಆಲ್ರೌಂಡರ್ ಪಾಲ್ ಕಾಲಿಂಗ್ವುಡ್ ಅವರನ್ನು ಇಸಿಬಿ ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ 3 ಪಂದ್ಯಗಳ ಟೆಸ್ಟ್ ಸರಣಿಗೆ ಹಂಗಾಮಿ ಮುಖ್ಯ ಕೋಚ್ ಆಗಿ ಸೋಮವಾರ ನೇಮಿಸಿದೆ.
ಆಸ್ಟ್ರೇಲಿಯಾದಲ್ಲಿ 0-4ರಲ್ಲಿ ಆ್ಯಶಸ್ ಕಳೆದುಕೊಂಡ ಬೆನ್ನಲ್ಲೇ ಕೋಚ್ ಕ್ರಿಸ್ ಸಿಲ್ವರ್ವುಡ್ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಿತ್ತು. ಇದೀಗ ಸಹಾಯಕ ಕೋಚ್ ಆಗಿದ್ದ ಕಾಲಿಂಗ್ವುಡ್ರನ್ನು ಮುಂದಿನ ಸರಣಿಗೆ ತಾತ್ಕಾಲಿಕ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
45 ವರ್ಷದ ಕಾಲಿಂಗ್ವುಡ್ ಕಳೆದ ತಿಂಗಳು ಇಂಗ್ಲೆಂಡ್ ಟಿ-20 ತಂಡದ ಮುಖ್ಯಕೋಚ್ ಆಗಿ ನೇಮಕವಾಗಿದ್ದರು. ಪ್ರಸ್ತುತ ಬಾರ್ಬಡೋಸ್ನಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅವರು ಫೆಬ್ರವರಿ 25ರಂದು ಆಟಗಾರರು ಆಂಟಿಗುವಾಗೆ ತೆರಳಿದ ನಂತರ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.
ಕೆರಿಬಿಯನ್ ಪ್ರವಾಸದಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡವನ್ನು ಮುನ್ನಡೆಸಲು ಪ್ರಾಮಾಣಿಕವಾಗಿ ಉತ್ಸುಕನಾಗಿದ್ದೇನೆ, ಇದಕ್ಕಾಗಿ ಕಾಯಲಾಗುತ್ತಿಲ್ಲ ಎಂದು ಕಾಲಿಂಗ್ವುಡ್ ಇಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯವನ್ನಾಡುವುದು ಅತ್ಯುನ್ನತವಾದ ಗೌರವವಾಗಿದೆ. ವಿಶೇಷವಾದದನ್ನು ಸಾಧಿಸಲು ಆಟಗಾರರಿಗೆ ಸ್ಪಷ್ಟತೆ, ನಿರ್ದೇಶನ ಮತ್ತು ಪ್ರೋತ್ಸಾಹ ನೀಡುವುದು ನನ್ನ ಉದ್ದೇಶವಾಗಿದೆ. ನಾನು ಈಗಾಗಲೇ ನಾಯಕ ರೂಟ್ ಮತ್ತು ಉಪನಾಯಕ ಬೆನ್ ಸ್ಟೋಕ್ಸ್ ಜೊತೆಗೆ ಮಾತನಾಡಿದ್ದೇನೆ. ಅವರಿಬ್ಬರು ತಂಡವನ್ನು ಹೊಸ ಋತುವಿನಲ್ಲಿ ಮುಂದಕ್ಕೆ ಕೊಂಡೊಯ್ಯಲು ಉತ್ಸುಕರಾಗಿದ್ದಾರೆ ಎಂದು ಕಾಲಿಂಗ್ವುಡ್ ಹೇಳಿದ್ದಾರೆ.
ಇದನ್ನೂ ಓದಿ:ಟಿ-20 ವಿಶ್ವಕಪ್ 2022: ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಇಂಡೋ - ಪಾಕ್ ಟಿಕೆಟ್ ಸೋಲ್ಡ್ ಔಟ್!