ಲಂಡನ್: 2021ರ ಐಪಿಎಲ್ನಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್ನ ಆಟಗಾರರಿಗೆ ಮುಂಬರುವ ನ್ಯೂಜಿಲ್ಯಾಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಜೂನ್ 2 ರಿಂದ ಲಾರ್ಡ್ಸ್ನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದೆ. ಬ್ರಿಟೀಷ್ ಮಾಧ್ಯಮವೊಂದರ ಪ್ರಕಾರ 14ನೇ ಆವೃತ್ತಿಯ ಐಪಿಎಲ್ನಲ್ಲಿ ಭಾಗವಹಿಸಿದ ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎಂದು ತಿಳಿಸಿದೆ.
ಐಪಿಎಲ್ನಲ್ಲಿ ಭಾಗವಹಿಸಿದ್ದ ಟೆಸ್ಟ್ ತಂಡದ ಖಾಯಂ ಆಟಗಾರರಾದ ಕ್ರಿಸ್ ವೋಕ್ಸ್, ಸ್ಯಾಮ್ ಕರ್ರನ್, ಮೊಯೀನ್ ಅಲಿ, ಜೋಶ್ ಬಟ್ಲರ್, ಜಾನಿ ಬೈರ್ಸ್ಟೋವ್ ಈ ಸರಣಿಯನ್ನು ತಪ್ಪಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಐಪಿಎಲ್ ರದ್ದಾದ ನಂತರ ಮೇ 5ರಂದು ಇಂಗ್ಲೆಂಡ್ಗೆ ತೆರಳಿದ್ದಾರೆ. ಅಲ್ಲಿ ಅವರು 10 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಹಾಗಾಗಿ ಅವರನ್ನು ಟೆಸ್ಟ್ ಸರಣಿಯಲ್ಲಿ ಆಡಿಸುವ ಆತುರ ಮ್ಯಾನೇಜ್ಮೆಂಟ್ಗಿಲ್ಲ. ಮುಂಬರುವ ಆ್ಯಶಸ್ ಸರಣಿಯು ದೃಷ್ಟಿಯಿಂದ ದೊಡ್ಡ ಬಳಗದ ಅಗತ್ಯತೆಯಿದೆ. ಹಾಗಾಗಿ ನಾವು ಈ ಸರಣಿಯಲ್ಲಿ ಕೆಲವು ಹೊಸ ಮುಖಗಳನ್ನು ಆಯ್ಕೆ ಮಾಡಲು ಬಯಸಿದ್ದೇವೆ ಎಂದು ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ಆಶ್ಲೇ ಗಿಲ್ಸ್ ಹೇಳಿದ್ದಾರೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ ಆಡುವುದನ್ನು ನಿಲ್ಲಿಸಲು ಸ್ಟಾರ್ ಇಂಡಿಯನ್ ಬೌಲರ್ ನಿರ್ಧಾರ