ಕರ್ನಾಟಕ

karnataka

By

Published : Dec 12, 2022, 5:39 PM IST

ETV Bharat / sports

ಪಾಕ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲೂ ಗೆಲುವು: ಇಂಗ್ಲೆಂಡ್‌ಗೆ ಐತಿಹಾಸಿಕ ಸರಣಿ ಜಯ

ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್​ ಸರಣಿಯ ಎರಡನೇ ಪಂದ್ಯವನ್ನು ಇಂಗ್ಲೆಂಡ್​ 26 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.

england-beats-pakistan-by-26-runs-in-2nd-test
ಪಾಕಿಸ್ತಾನವನ್ನು ಬಗ್ಗುಬಡಿದ ಇಂಗ್ಲೆಂಡ್​ : 26 ರನ್​ಗಳ ಜಯ

ಮುಲ್ತಾನ್‌(ಪಾಕಿಸ್ತಾನ): ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಣ ಮೂರು ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್​ 26 ರನ್‌ಗಳಿಂದ ವಿಜಯ ಸಾಧಿಸಿತು. 17 ವರ್ಷಗಳ ಬಳಿಕ ಇಂಗ್ಲೆಂಡ್ ತಂಡವು ಪಾಕಿಸ್ತಾನಕ್ಕೆ ಟೆಸ್ಟ್ ಸರಣಿಗಾಗಿ ಆಗಮಿಸಿದ್ದು, ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು 2-0 ಮೂಲಕ ಕೈವಶ ಮಾಡಿಕೊಂಡಿದೆ.

ಮೊದಲ ಟೆಸ್ಟ್​ ಪಂದ್ಯದಲ್ಲಿಯೂ ಬೆನ್​ ಸ್ಟೋಕ್ಸ್​ ಪಡೆ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಸವಾಲಿನ ಮೊತ್ತ ಬೆನ್ನತ್ತಿದ ಪಾಕ್​ 328 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಮತ್ತೆ ಇಂಗ್ಲೆಂಡ್‌ಗೆ​ ಶರಣಾಯಿತು. ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 281 ರನ್‌ಗಳಿಸಲಷ್ಟೇ ಶಕ್ತವಾಯಿತು. ಬೆನ್​ ಡಕೆಟ್​ (63) ಮತ್ತು ಓಲಿ ಪೋಪ್​ (61) ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಪಾಕ್​ ಪರ ಅಬ್ರಾರ್​ ಅಹ್ಮದ್​ 7 ವಿಕೆಟ್​​ ಪಡೆಯುವ ಮೂಲಕ ಇಂಗ್ಲೆಂಡ್​ ಆಟಗಾರರನ್ನು ಇನ್ನಿಲ್ಲದಂತೆ ಕಾಡಿದರು. ಝಾಹಿದ್​ ಮಹ್ಮೂದ್​​ 3 ವಿಕೆಟ್​ ಉರುಳಿಸಿದರು.

ಈ ಸಾಧಾರಣ ಗುರಿ ಬೆನ್ನತ್ತಿದ ಪಾಕ್​ 202 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಪಾಕ್​ ಪರ ಬಾಬರ್​ ಅಜಂ(75) ಮತ್ತು ಸೌದ್ ಶಕೀಲ್​(63) ಉತ್ತಮ ರನ್​ ಗಳಿಸಿದ್ದು ಬಿಟ್ಟರೆ ಬೇರೆಲ್ಲ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸಿದರು. ಇಂಗ್ಲೆಂಡ್​​ ಪರ ಜಾಕ್​ ಲೀಚ್​ 4, ಜೋ ರೂಟ್​ 2 ವಿಕೆಟ್​ ಕಬಳಿಸಿದ್ದಾರೆ.

2ನೇ ಇನ್ನಿಂಗ್ಸ್​​ನಲ್ಲಿ ಮತ್ತೆ ಕುಸಿದ ಪಾಕ್:ಬಳಿಕ 79 ರನ್‌ಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​​ ಹ್ಯಾರಿ ಬ್ರೂಕ್​(108) ಶತಕ ಹಾಗೂ ಬೆನ್​ ಡಕೆಟ್​ (79) ಅವರ ಅರ್ಧಶತಕದ ನೆರವಿನಿಂದ 275 ರನ್​ ಗಳಿಸಿತು. ಈ ಮೂಲಕ ಪಾಕ್​ಗೆ 355 ರನ್​ಗಳ ಗುರಿ ನೀಡಿತು.

ಬಳಿಕ ಬ್ಯಾಟಿಂಗ್​ ನಡೆಸಿದ ಪಾಕ್‌ನ ಸೌದ್​ ಶಕೀಲ್​ (94) ಮತ್ತು ಇಮಾಮ್​ ಉಲ್​ ಹಕ್‌(60) ನೆರವಿನಿಂದ ಕೇವಲ 328 ರನ್​ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಇಂಗ್ಲೆಂಡ್​ಗೆ ಶರಣಾಯಿತು. ಇಂಗ್ಲೆಂಡ್​ ಪರ ಮಾರ್ಕ್​ ಹುಡ್​ 65 ರನ್​ಗೆ​​ 4 ವಿಕೆಟ್ ಹಾಗೂ ಓಲಿ ರಾಬಿನ್​ಸನ್​​ 2 ವಿಕೆಟ್​ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಇದನ್ನೂ ಓದಿ:ಯುವರಾಜ್​ ಸಿಂಗ್​ಗೆ 41ರ ಜನ್ಮದಿನದ ಸಂಭ್ರಮ.. ಯುವಿ ಆಟ ನೆನೆದು ಟ್ವೀಟ್​ ಮಾಡಿದ ಬಿಸಿಸಿಐ

ABOUT THE AUTHOR

...view details