ಕರ್ನಾಟಕ

karnataka

ETV Bharat / sports

ಅಂಡರ್​ 19 ವಿಶ್ವಕಪ್ ​: ಆಫ್ಘಾನ್​​​ ವಿರುದ್ಧ ಭರ್ಜರಿ ಜಯದೊಂದಿಗೆ 24 ವರ್ಷದ ಬಳಿಕ ಫೈನಲ್​ ಪ್ರವೇಶಿಸಿದ ಇಂಗ್ಲೆಂಡ್​​​ - ಅಂಡರ್​-19 ವಿಶ್ವಕಪ್​​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ​ಅಫ್ಘಾನಿಸ್ತಾನ ವಿರುದ್ಧ ಬಲಿಷ್ಠ ಇಂಗ್ಲೆಂಡ್​ಗೆ ಜಯ

232 ರನ್‌ಗಳ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನದ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​​ಗೆ ಮತ್ತೊಬ್ಬ ಓಪನರ್ ಮೊಹಮ್ಮದ್ ಇಶಾಕ್ ಮತ್ತು ಅಲ್ಲಾ ನೂರ್ 90 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನ ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು..

ಅಂಡರ್​ 19 ವಿಶ್ವಕಪ್
ಅಂಡರ್​ 19 ವಿಶ್ವಕಪ್

By

Published : Feb 2, 2022, 1:16 PM IST

ಆ್ಯಂಟಿಗುವಾ( ವೆಸ್ಟ್​ ಇಂಡೀಸ್) :ಅಂಡರ್​-19 ವಿಶ್ವಕಪ್​​ನ ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಬಲಿಷ್ಠ ಇಂಗ್ಲೆಂಡ್ 15 ರನ್​ಗಳಿಂದ ಜಯ ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್​​ ತಂಡ ಫೈನಲ್​ ಪ್ರವೇಶಿಸಿದೆ.

ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಇಂಗ್ಲೆಂಡ್​ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಕೇವಲ 9 ರನ್​​ ಗಳಿಸಿದಾಗ ಮೊದಲ ವಿಕೆಟ್​​ ಕಳೆದುಕೊಂಡ ಆಂಗ್ಲರು, 136 ರನ್​ ಗಳಿಸುವಷ್ಟರಲ್ಲೇ ಪ್ರಮುಖ ಆರು ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆರಂಭಿಕ ಆಘಾತದ ನಡುವೆ ಓಪನರ್ ಜಾರ್ಜ್ ಥಾಮಸ್‌ ಅರ್ಧಶತಕ ಸಿಡಿಸಿ ಮಿಂಚಿದರು. 69 ಎಸೆತಗಳಲ್ಲಿ 50 ರನ್ ಕಲೆ ಹಾಕಿದ ಜಾರ್ಜ್‌ಗೆ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ ಕೂಡ ಸಾಥ್​​ ನೀಡಲಿಲ್ಲ. ಆದ್ರೆ, ಕೆಳ ಕ್ರಮಾಂಕದಲ್ಲಿ ಜಾರ್ಜ್‌ ಬೆಲ್ 56 ರನ್‌ ಕಲೆ ಹಾಕಿ ಕುಸಿದಿದ್ದ ತಂಡಕ್ಕೆ ಆಧಾರವಾದರು.

ಜಾರ್ಜ್ ಬೆಲ್ 67 ಎಸೆತಗಳಲ್ಲಿ 56 ರನ್ ಕಲೆ ಹಾಕುವ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್‌ ಹೊರ್ಟನ್ 36 ಎಸೆತಗಳಲ್ಲಿ 53 ರನ್‌ ಕಲೆ ಹಾಕುವ ಮೂಲಕ ಇಂಗ್ಲೆಂಡ್ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

ಮಳೆಯಿಂದಾಗಿ ಪಂದ್ಯವು ಡೆಕ್ವರ್ತ್ ಲೂಹಿಸ್ ನಿಯಮದಡಿಯಲ್ಲಿ 47 ಓವರ್‌ಗಳಿಗೆ ಸೀಮಿತಗೊಂಡಿತ್ತು. ಇಂಗ್ಲೆಂಡ್ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು.

232 ರನ್‌ಗಳ ಗುರಿ ಬೆನ್ನತ್ತಿದ ಆಫ್ಘಾನಿಸ್ತಾನದ ಮೊದಲ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡಿತು. ಆದರೆ, ಎರಡನೇ ವಿಕೆಟ್​​ಗೆ ಮತ್ತೊಬ್ಬ ಓಪನರ್ ಮೊಹಮ್ಮದ್ ಇಶಾಕ್ ಮತ್ತು ಅಲ್ಲಾ ನೂರ್ 90 ರನ್​ಗಳ ಜೊತೆಯಾಟವಾಡುವ ಮೂಲಕ ತಂಡವನ್ನ ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು.

ಆದರೆ, ಈ ಇಬ್ಬರು ಆಟಗಾರರ ವಿಕೆಟ್ ಪತನದ ಬಳಿಕ ಆಫ್ಘನ್ ತಂಡದ ಆಟಗಾರರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಕೊನೆಯ ಹಂತದಲ್ಲಿ ಅಬ್ದುಲ್ ಹಲ್ದಿ ಅಜೇಯ 37, ಬಿಲಾಲ್ ಅಹ್ಮದ್ 33 ರನ್‌ಗಳಿಸಿದರೂ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ 47 ಓವರ್‌ಗಳಲ್ಲಿ ಆಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 215 ರನ್‌ ಗಳಿಸಲಷ್ಟೇ ಶಕ್ತವಾಯಿತು. ಆಫ್ಘಾನಿಸ್ತಾನ ಪರ ಮೊಹಮ್ಮದ್ ಇಶಾಕ್ 43 ಹಾಗೂ ಅಲ್ಲಾ ನೂರ್ 60 ರನ್​​ಗಳಿಸಿದರು. ಚೊಚ್ಚಲ ಫೈನಲ್ ಪ್ರವೇಶಿಸುವ ಆಫ್ಘಾನಿಸ್ತಾನದ ಕನಸು ಮತ್ತೆ ಕನಸಾಗಿಯೇ ಉಳಿಯಿತು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details