ಲಂಡನ್ (ಯುಕೆ): ಭಾರತದ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಇಂಗ್ಲೆಂಡ್ ತಂಡವು ತನ್ನ 'ಬಾಜ್‌ಬಾಲ್' ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್ ಮುಂದುವರೆಸಲಿದೆ. ವಿಭಿನ್ನ ಪರಿಸ್ಥಿತಿ, ವಾತಾವರಣದಲ್ಲಿ ನಮ್ಮ ತಂಡದ ಸತ್ವಪರೀಕ್ಷೆಗೆ ಇದೊಂದು ಅದ್ಭುತ ಅವಕಾಶ ಎಂದು ಇಂಗ್ಲೆಂಡ್‌ನ ಆಕ್ರಮಣಕಾರಿ ಆರಂಭಿಕ ಆಟಗಾರ ಝಾಕ್ ಕ್ರಾಲಿ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಕುರಿತಂತೆ ಮಾತನಾಡಿರುವ ಝಾಕ್ ಕ್ರಾಲಿ, ''ನನಗೆ ಅಲ್ಲಿನ ಮೈದಾನಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಭಾರತದಲ್ಲಿ ಕೆಲವೊಮ್ಮೆ ಚೆಂಡು ಸ್ವಲ್ಪಮಟ್ಟಿಗೆ ಸೀಮ್ ಹಾಗೂ ಸ್ವಿಂಗ್ ಆಗುತ್ತದೆ. ಭಾರತ ತಂಡದಲ್ಲಿಯೂ ಅದ್ಭುತ ವೇಗದ ಬೌಲರ್ಗಳಿದ್ದಾರೆ. ಅಲ್ಲಿನ ಕೆಲ ಪಿಚ್ಗಳು ನಮ್ಮ ಬ್ಯಾಟಿಂಗ್ ಶೈಲಿಗೆ ಹೊಂದುವಂತೆ ಇರಲಿವೆ ಎಂಬ ಆಶಯವಿದೆ. ಆದರೆ, ಸ್ಪಿನ್ಗೆ ನೆರವು ನೀಡುವ ಅಂಗಳವಾದರೂ ಕೂಡ ನಾವು ಸ್ಪಿನ್ ಬೌಲಿಂಗ್ನ್ನೂ ಸಮರ್ಥವಾಗಿ ಎದುರಿಸಬಲ್ಲೆವು. ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಅಗತ್ಯವಾಗಿದ್ದು, ಅದಕ್ಕೆ ತಕ್ಕಂತೆ ಪ್ರದರ್ಶನ ಮೂಡಿಬರಲಿದೆ. ಆದರೆ, ಈ ಬಾರಿ ನಾವು ಆಡಲಿರುವ ಮೈದಾನಗಳ ಬಗ್ಗೆ ನಮಗೆ ಹೆಚ್ಚಿನ ಅನುಭವಿಲ್ಲ. ಅಹಮದಾಬಾದ್ ಹಾಗೂ ಚೆನ್ನೈ ಪಿಚ್ನಂತೆ ತಿರುವು ಇರಲಿದೆಯಾ ಎಂಬುದು ಗೊತ್ತಿಲ್ಲ. ಕಳೆದ ಸಲ ಅಹಮದಾಬಾದ್ ಹಾಗೂ ಚೆನ್ನೈನಲ್ಲಿ ಆಡಿದ್ದೆವು'' ಎಂದು ಕ್ರಾಲಿ ಹೇಳಿದ್ದಾರೆ.
ಕಿವೀಸ್ನ ಮಾಜಿ ಬ್ಯಾಟರ್ ಬ್ರೆಂಡನ್ ಮೆಕಲಮ್ ಇಂಗ್ಲೆಂಡ್ ತಂಡದ ಕೋಚ್ ಹಾಗೂ ನಾಯಕನಾಗಿ ಬೆನ್ ಸ್ಟೋಕ್ಸ್ ಜವಾಬ್ದಾರಿ ಹೊತ್ತ ಬಳಿಕ ಆಂಗ್ಲರ ಟೆಸ್ಟ್ ಆಟದ ಶೈಲಿಯು ಕ್ರಿಕೆಟ್ ಜಗತ್ತನ್ನು ಬೆರಗುಗೊಳಿಸುತ್ತಿದೆ. ಪಂದ್ಯದ ಉದ್ದಕ್ಕೂ ಆಕ್ರಮಣಕಾರಿ ಬ್ಯಾಟಿಂಗ್, ಟೆಸ್ಟ್ನ ಮೊದಲ ದಿನವೇ ಡಿಕ್ಲೇರ್ ಮಾಡಿಕೊಳ್ಳುವುದು ಸೇರಿದಂತೆ ಹಲವು ಪ್ರಯೋಗಗಳಿಂದ ಇಂಗ್ಲೆಂಡ್ ತಂಡದ ಆಟವು ಟೆಸ್ಟ್ ಮಾದರಿಯ ಸ್ವರೂಪವನ್ನೇ ವಿಭಿನ್ನವಾಗಿಸುತ್ತಿದೆ. ಎದುರಾಳಿಯ ವಿರುದ್ಧ ಪ್ರತಿ ಸರಣಿಯಲ್ಲೂ ಬಾಜ್‌ಬಾಲ್ ತಂತ್ರದ ಮೂಲಕ ಕ್ರಿಕೆಟ್ಪ್ರಿಯರ ಗಮನ ಸೆಳೆಯುತ್ತಿದೆ.