ಲೀಡ್ಸ್: ಇಂಗ್ಲೆಂಡ್ ಮತ್ತು ದ.ಆಫ್ರಿಕಾ ನಡುವೆ ನಿನ್ನೆ ನಡೆದ 3ನೇ ಮತ್ತು ಅಂತಿಮ ಏಕದಿನ ಪಂದ್ಯ ಮಳೆಗೆ ಕೊಚ್ಚಿ ಹೋಗಿದೆ. ಮೊದಲೆರಡು ಪಂದ್ಯಗಳು ಮುಕ್ತಾಯ ಕಂಡ ನಂತರ ಸರಣಿಯಲ್ಲಿ ಎರಡೂ ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದವು. ಆದರೆ, ನಿರ್ಣಾಯಕ ಪಂದ್ಯ ಧಾರಾಕಾರ ಮಳೆಯಿಂದಾಗಿ ರದ್ದಾಗಿದ್ದು, ಸರಣಿ ಸಮಬಲದಲ್ಲಿ ಮುಕ್ತಾಯಗೊಂಡಿದೆ.
ಚೆಸ್ಟರ್ ಲೇ ಸ್ಟ್ರೀಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ದ.ಆಫ್ರಿಕಾ ಆತಿಥೇಯರ ವಿರುದ್ಧ 62 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ಮ್ಯಾಂಚೆಸ್ಟರ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಪುಟಿದೆದ್ದ ಇಂಗ್ಲೆಂಡ್, ಹರಿಣಗಳ ವಿರುದ್ಧ 118 ರನ್‌ಗಳ ಬೃಹತ್ ಗೆಲುವು ಸಾಧಿಸಿತ್ತು.
ಹೀಗೆ ಮೊದಲೆರಡು ಪಂದ್ಯಗಳಲ್ಲಿ ಇತ್ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿರುವುದರಿಂದ ಮೂರನೇ ಏಕದಿನ ಪಂದ್ಯ ಮಹತ್ವ ಪಡೆದುಕೊಂಡಿತ್ತು. ಈ ಪಂದ್ಯವನ್ನು ಗೆಲ್ಲುವ ತಂಡ ಸರಣಿಯಲ್ಲಿ ವಿಜೇತ ತಂಡವಾಗಿ ಹೊರ ಹೊಮ್ಮುತ್ತಿತ್ತು. ಆದ್ರೆ ಲೀಡ್ಸ್ನ ಹೆಡಿಂಗ್ಲೆಯಲ್ಲಿ ನಡೆದಿದ್ದ ಕೊನೆಯ ಏಕದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್‌ಗಿಳಿದ ತಂಡ 11 ರನ್ಗಳಿಸಿದ್ದಾಗ ಜನ್ನೆಮನ್ ಮಲನ್ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಕ್ವಿಂಟನ್ ಡಿ ಕಾಕ್ ಜೊತೆಗೂಡಿ ತಂಡದ ಮೊತ್ತವನ್ನು 100 ಗಡಿ ತಲುಪಿಸಿದರು. ಆ ಬಳಿಕ ಡಸ್ಸೆನ್ 26 ರನ್ಗಳನ್ನು ಕಲೆ ಹಾಕಿ ಪೆವಿಲಿಯನ್ ಹಾದಿ ಹಿಡಿದರು. ಐಡೆನ್ ಮಾರ್ಕ್ರಾಮ್ ಮತ್ತು ಡಿ ಕಾಕ್ ಇಂಗ್ಲೆಂಡ್ ತಂಡದ ಬೌಲರ್ಗಳನ್ನು ಬೆವರಿಳಿಸುತ್ತಿರುವಾಗ ಮಳೆ ಸುರಿಯಿತು.
ದ.ಆಫ್ರಿಕಾ 27.4 ಓವರ್ಗಳಿಗೆ 2 ವಿಕೆಟ್ ಕಳೆದುಕೊಂಡು 157 ರನ್ ಕಲೆ ಹಾಕಿ ಮುನ್ನಡೆಯುತ್ತಿದ್ದಾಗ ಏಕಾಏಕಿ ಮಳೆ ಸುರಿದು ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಆದ್ರೆ ಎಷ್ಟೇ ಸಮಯ ಕಳೆದರೂ ಮಳೆ ನಿಲ್ಲಲೇ ಇಲ್ಲ. ಹೀಗಾಗಿ ಕೊನೆಗೆ ಪಂದ್ಯ ರದ್ದಾಗಿದ್ದು, ಸರಣಿ ಸಮಬಲದಲ್ಲಿ ಮುಗಿಯಿತು. ಇಂಗ್ಲೆಂಡ್ ತಂಡದ ಪರ ಡೇವಿಡ್ ವಿಲ್ಲಿ ಮತ್ತು ಆದಿಲ್ ರಶೀದ್ ತಲಾ ಒಂದೊಂದು ವಿಕೆಟ್ ಪಡೆದರು.
ಇತ್ತಂಡಗಳ ನಡುವೆ ಜುಲೈ 27ರಿಂದ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅಂತಿಮವಾಗಿ 3 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 17ರಿಂದ ನಡೆಯಲಿದೆ.
ಇದನ್ನೂ ಓದಿ:IND vs WI ODI: ಸಂಘಟಿತ ಹೋರಾಟಕ್ಕೆ ಸಂದ ಫಲ; ಕೆರಿಬಿಯನ್ನರ ವಿರುದ್ಧ ಸರಣಿ ಗೆದ್ದ ಭಾರತ