ಎಡ್ಜ್‌ಬಾಸ್ಟನ್(ಯುಕೆ) :ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಎಡ ಮೊಣಕೈ ಗಾಯದ ಬಗ್ಗೆ ನಿಗಾ ವಹಿಸಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅವರ ಲಭ್ಯತೆಯ ಬಗ್ಗೆ ಇಂದು (ಬುಧವಾರ) ನಿರ್ಧರಿಸಲಾಗುವುದು ಎಂದು ನ್ಯೂಜಿಲ್ಯಾಂಡ್ ಮುಖ್ಯ ಕೋಚ್ ಗ್ಯಾರಿ ಸ್ಟೀಡ್ ಮಂಗಳವಾರ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿದೆ. ಹೀಗಾಗಿ ನಾಳೆ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯವು ಎರಡೂ ತಂಡಗಳಿಗೆ ಸರಣಿ ಗೆಲುವಿಗೆ ನಿರ್ಣಾಯಕವಾಗಲಿದೆ. ಮೊದಲ ಟೆಸ್ಟ್ ಸಮಯದಲ್ಲಿ ಎಡಗೈ ತೋರು ಬೆರಳಿಗೆ ಗಾಯ ಮಾಡಿಕೊಂಡಿರುವ ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಎರಡನೇ ಟೆಸ್ಟ್ನಿಂದ ಹೊರಗುಳಿದಿದ್ದಾರೆ ಎಂದು ಕೋಚ್ ಹೇಳಿದ್ದಾರೆ.
ಲಾರ್ಡ್ಸ್ ಟೆಸ್ಟ್ನಲ್ಲಿದ್ದ ಎಲ್ಲಾ ವೇಗದ ಬೌಲರ್‌ಗಳೂ ಕೂಡ ಈ ಪಂದ್ಯದಲ್ಲಿ ಆಡುವುದಿಲ್ಲ. ಟ್ರೆಂಟ್ ಬೌಲ್ಟ್ ಲಭ್ಯರಿದ್ದು ತಂಡಕ್ಕೆ ಹಿಂದಿರುಗುವ ಸಾಧ್ಯತೆಯಿದೆ. ಸ್ಯಾಂಟ್ನರ್ ಗಾಯದಿಂದ ಹೊರಗುಳಿಯಲಿದ್ದು, ಕೇನ್ ವಿಲಿಯಮ್ಸನ್ ಲಭ್ಯತೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಬ್ಲ್ಯಾಕ್‌ಕ್ಯಾಪ್ಸ್ ಅಧಿಕೃತ ಟ್ವೀಟ್ ಮೂಲಕ ತಿಳಿಸಿದೆ.