ಲಂಡನ್: ರಿಷಭ್ ಪಂತ್ ತಮ್ಮ ಕೌಶಲ್ಯ ಮತ್ತು ಉದ್ದೇಶಗಳಿಂದ ಪಂದ್ಯದ ಗತಿ ಬದಲಾಯಿಸಬಲ್ಲೇ ಎಂದು ಭಾವಿಸಿದರೆ, ಅವರು ಯಾವಾಗ ಬೇಕಾದರೂ ತಮ್ಮಿಷ್ಟದಂತೆ ಆಡುವ ಅವಕಾಶವನ್ನು ತೆಗೆದುಕೊಳ್ಳಬಹುದು ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲನೇ ಟೆಸ್ಟ್ ಪಂದ್ಯ ಕೊನೆಯ ದಿನ ಸುರಿದ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು. ಇಂಗ್ಲೆಂಡ್ ಭಾರತಕ್ಕೆ 209ರನ್ಗಳ ಟಾರ್ಗೆಟ್ ನೀಡಿತ್ತು. ಭಾರತಕ್ಕೆ ಕೊನೆಯ ದಿನ ಗೆಲ್ಲಲು 9 ವಿಕೆಟ್ ಕೈಯಲ್ಲಿರುವಂತೆ 157 ರನ್ ಗಳಿಸಬೇಕಿತ್ತು. ಆದರೆ, ವರುಣ ದೇವಾ ಭಾರತ ಗೆಲುವಿನ ಆಸೆಗೆ ತಣ್ಣೀರೆರಚಿದನು. ಇನ್ನು ಮೊದಲ ಇನ್ನಿಂಗ್ಸ್ನಲ್ಲಿ ಸ್ಫೋಟಕ ಪ್ರದರ್ಶನ ತೋರಿದ್ದ ಪಂತ್ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು.
ಆದರೆ ನಾಯಕ ಕೊಹ್ಲಿ ಪಂತ್ ಆಟದ ಬೆನ್ನಿಗೆ ನಿಂತಿದ್ದು, ಅವರಿಗೆ ವಿಶ್ವಾಸ ಇದ್ದರೆ ಯಾವಾಗ ಬೇಕಾದರೂ ತಮ್ಮ ಸ್ವಾಭಾವಿಕ ಆಟ ಆಡಬಹುದು ಎಂದಿದ್ದಾರೆ. " ಅವನು ಮೂಲತಃ ಇದೇ ಮಾದರಿಯಲ್ಲಿ ಆಡುತ್ತಾನೆ. ಆ ರೀತಿಯಲ್ಲೇ ದೀರ್ಘ ಇನಿಂಗ್ಸ್ ಕಟ್ಟುವ ಸಾಮರ್ಥ್ಯ ಅವನಿಗಿದೆ. ಟೆಸ್ಟ್ ಎಂದ ಮಾತ್ರಕ್ಕೆ ಆತ ಬಹಳ ರಕ್ಷಣಾತ್ಮಕವಾಗಿ ಆಡಬೇಕೆಂದಿಲ್ಲ. ಪರಿಸ್ಥಿತಿಯ ಬೇಡಿಕೆಯನ್ನು ಅರ್ಥಮಾಡಿಕೊಳ್ಳುವಷ್ಟು ಆತ ಬುದ್ಧಿವಂತನಾಗಿದ್ದಾನೆ.
ಒಂದು ವೇಳೆ ನಾವು ಪಂದ್ಯವನ್ನು ಉಳಿಸಲು ನೋಡುತ್ತಿದ್ದರೆ, ಅವನು ಆ ರೀತಿಯ ಹೊಡೆತಗಳಿಗೆ ಮುಂದಾಗುವುದನ್ನು ನೀವು ನೋಡಲು ಸಾಧ್ಯವಿಲ್ಲ. ಎಲ್ಲೆಲ್ಲಿ ಪಂದ್ಯದ ಪರಿಸ್ಥಿತಿ 50-50 ಇದೆಯೋ ಮತ್ತು ಅವನು ತನ್ನ ಆಟದಿಂದ ಪಂದ್ಯವನ್ನು ನಮ್ಮ ತಂಡದ ಕಡೆಗೆ ಬದಲಾಯಿಸಬಹುದು ಎಂದು ಆತ ಭಾವಿಸಿದರೆ, ಅವಕಾಶಗಳನ್ನು ತೆಗೆದುಕೊಳ್ಳುತ್ತಾನೆ, ಮುಂದೆಯೂ ತೆಗೆದುಕೊಳ್ಳಬಹುದು ಎಂದು ವರ್ಚುಯಲ್ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದಾರೆ.
ಅದು ಅವನ ಸ್ವಾಭಾವಿಕ ಆಟ, ನಾವು ಕೂಡ ಅವನಿಂದ ಇದನ್ನೇ ಬಯಸುತ್ತೇವೆ. ಪಂದ್ಯದ ಗತಿಯನ್ನು ಬದಲಿಸುವ ಆಟವನ್ನು ನಾವೆಲ್ಲಾ ರಿಷಭ್ ಪಂತ್ರಿಂದ ನಿರೀಕ್ಷಿಸುತ್ತೇವೆ. ಅವನ ಆಟ ನಮಗೆ ಸಮತೋಲನ ತಂದುಕೊಡುತ್ತದೆ. ಆತ ಇದೇ ದಾರಿಯಲ್ಲಿ ಮುಂದೆಯೂ ಆಡಲಿದ್ದಾರೆ ಎಂದು ಕೊಹ್ಲಿ ಯುವ ಆಟಗಾರನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದ್ದಾರೆ.
ಇನ್ನು ಅಜಿಂಕ್ಯ ರಹಾನೆ ಫಾರ್ಮ್ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ, ನಾವು ಆ ವಿಭಾಗದಲ್ಲಿ ಸಮಸ್ಯೆಯಿದೆ ಎಂದು ಭಾವಿಸಿಲ್ಲ. ಯಾವೊಬ್ಬ ಆಟಗಾರನ ವೈಯಕ್ತಿಕ ಫಾರ್ಮ್ ಬಗ್ಗೆ ನಾವು ಚಿಂತೆ ಮಾಡುವುದಿಲ್ಲ. ಅವರು ತಂಡಕ್ಕೆ ಹೇಗೆ ಬಲ ತುಂಬಲಿದ್ದಾರೆ ಎನ್ನುವುದರ ಕಡೆಗೆ ನಮ್ಮ ಗಮನವಿರುತ್ತದೆ. ನಾವು ಕಠಿಣ ಪರಿಸ್ಥಿಯಲ್ಲಿ ಬ್ಯಾಟಿಂಗ್ ಮಾಡಲು ಎದುರು ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಒಂದಿಬ್ಬರು ವಿಫಲರಾದರೆ, ಉಳಿದವರಲ್ಲಿ ಯಾರಾದರೂ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಈ ಮನೋಬಲವೇ ನಮ್ಮನ್ನು ಮೊದಲ ಪಂದ್ಯದಲ್ಲಿ ಗೆಲುವಿನ ಹಂಚಿಗೆ ತೆಗೆದುಕೊಂಡು ಬಂದಿತ್ತು ಎಂದು ತಿಳಿಸಿದ್ದಾರೆ.
ಇದನ್ನು ಓದಿ:ನನ್ನನ್ನು ನಾನು ಹೆಚ್ಚು ನಂಬುತ್ತೇನೆ, ಅದೇ ನನ್ನ ಯಶಸ್ಸಿಗೆ ಕಾರಣ: ರವೀಂದ್ರ ಜಡೇಜಾ