ನ್ಯಾಟಿಂಗ್ಹ್ಯಾಮ್: ಟ್ವೆಂಟಿ-20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ನೂತನ ನಾಯಕ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿರುವ ಭಾರತ ತಂಡ ಕ್ಲೀನ್ ಸ್ವೀಪ್ನತ್ತ ಕಣ್ಣಿಟ್ಟಿದೆ. ನ್ಯಾಟಿಂಗ್ಹ್ಯಾಮ್ನ ಟ್ರೆಂಟ್ ಬ್ರಿಡ್ಜ್ನಲ್ಲಿ ಇಂದು ಅಂತಿಮ ಟಿ-20 ಹಣಾಹಣಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ 50 ರನ್ ಹಾಗೂ ಶನಿವಾರ ನಡೆದ ಎರಡನೇ ಕಾದಾಟದಲ್ಲಿ 49 ರನ್ಗಳಿಂದ ಇಂಗ್ಲೆಂಡ್ ಮಣಿಸಿರುವ ಭಾರತ ಸರಣಿ ಗೆದ್ದ ವಿಶ್ವಾಸದಲ್ಲಿದೆ. ಪವರ್ ಪ್ಲೇನಲ್ಲಿ ಭಾರತೀಯ ಬೌಲರ್ಗಳೆದುರು ಆಂಗ್ಲ ದಾಂಡಿಗರು ಪರದಾಡುತ್ತಿರುವುದು ಭಾರತದ ಗೆಲುವನ್ನು ಸುಲಭವಾಗಿಸಿದೆ. ಈಗಾಗಲೇ ಸರಣಿ ಗೆದ್ದಿರುವ ಕಾರಣ ಕೊನೆಯ ಪಂದ್ಯದಲ್ಲಿ ಭಾರತ ತಂಡದಲ್ಲಿ ಒಂದೆರಡು ಬದಲಾವಣೆ ಮಾಡುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಉಮ್ರಾನ್ ಮಲಿಕ್ ಅಥವಾ ಅವೇಶ್ ಖಾನ್ಗೆ ಅವಕಾಶ ನೀಡಿ, ಭುವನೇಶ್ವರ್ ಕುಮಾರ್ ಇಲ್ಲವೇ ಹರ್ಷಲ್ ಪಟೇಲ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಬ್ಯಾಟಿಂಗ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಯಶಸ್ವಿಯಾದ ರಿಷಬ್ ಪಂತ್ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಫಾರ್ಮ್ನಲ್ಲಿದ್ದ ದೀಪಕ್ ಹೂಡಾ ಅವರನ್ನು 2ನೇ ಪಂದ್ಯದಿಂದ ಕೈಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದಿನೇಶ್ ಕಾರ್ತಿಕ್ ಅಥವಾ ಸೂರ್ಯಕುಮಾರ್ ಯಾದವ್ ಬದಲಿಗೆ ಹೂಡಾ ತಂಡಕ್ಕೆ ಮರಳಬಹುದಾಗಿದೆ. ಕಳೆದ ಪಂದ್ಯದಲ್ಲೂ ರನ್ ಗಳಿಸಲು ವಿಫಲವಾದ ವಿರಾಟ್ ಕೊಹ್ಲಿ ಮೇಲೆ ಮತ್ತೆ ಒತ್ತಡ ಇರಲಿದೆ.