ಲಂಡನ್: ಟೀಂ ಇಂಡಿಯಾದ ಉದಯೋನ್ಮುಖ ವೇಗಿ ಶಾರ್ದುಲ್ ಠಾಕೂರ್ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಬುಧವಾರ ಖಚಿತಪಡಿಸಿದೆ. ಮೂರನೇ ಪಂದ್ಯಕ್ಕೆ ವೇಗದ ಬೌಲರ್ ಲಭ್ಯರಾಗಲಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಕೂತೂಹಲ ಘಟಕ್ಕೆ ತೆರಳಿತ್ತಾದರೂ, ಕೊನೆಯ ದಿನ ಮಳೆರಾಯ ಆಟಕ್ಕೆ ಅವಕಾಶ ಕೊಡದ ಹಿನ್ನೆಲೆ ಡ್ರಾನಲ್ಲಿ ಅಂತ್ಯಗೊಂಡಿತ್ತು. ಆದರೆ, ಆ ಪಂದ್ಯಲ್ಲಿ ಪ್ರವಾಸಿ ಭಾರತ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಇದೀಗ ಲಾರ್ಡ್ಸ್ನಲ್ಲಿ ಗುರುವಾರದಿಂದ ಆರಂಭವಾಗಲಿರುವ ಪಂದ್ಯದತ್ತ ಎಲ್ಲರ ಗಮನ ತಿರುಗಿದೆ.
ಮೊದಲ ಪಂದ್ಯದಲ್ಲಿ ಭಾರತದ ನಾಲ್ಕು ವೇಗಿಗಳು(ಬುಮ್ರಾ, ಶಮಿ, ಶಾರ್ದೂಲ್, ಸಿರಾಜ್) ಮತ್ತು ರವೀಂದ್ರ ಜಡೇಜಾ ಕಣಕ್ಕಿಳಿದಿದ್ದರು. ಹನ್ನೊಂದರ ಬಳಗದಿಂದ ಆರ್ ಅಶ್ವಿನ್ರನ್ನು ಕೈಬಿಟ್ಟಿದ್ದು, ಕ್ರಿಕೆಟ್ ತಜ್ಞರಿಗೆ ಮತ್ತು ಅಭಿಮಾನಿಗಳಿಗೆ ಆಶ್ಚರ್ಯ ತಂದಿತ್ತು. ಯಾಕೆಂದರೆ, ಅವರು ಟೆಸ್ಟ್ ಪಂದ್ಯಕ್ಕೂ ಕೌಂಟಿ ಪಂದ್ಯದಲ್ಲಿ ಆಡಿ ಉತ್ತಮ ಪ್ರದರ್ಶನ ತೋರಿದ್ದರು.