ಲಂಡನ್: ಉಪನಾಯಕ ಅಜಿಂಕ್ಯ ರಹಾನೆ(61) ಅವರ ಅರ್ಧಶತಕ ಹಾಗೂ ಪೂಜಾರ ಅವರ 45 ರನ್ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ 2ನೇ ಇನ್ನಿಂಗ್ಸ್ನಲ್ಲಿ ಭಾರತ ತಂಡ 6 ವಿಕೆಟ್ ಕಳೆದುಕೊಂಡು 154 ರನ್ ಮುನ್ನಡೆ ಸಾಧಿಸಿದೆ.
ನಾಲ್ಕನೇ ದಿನ 27 ರನ್ಗಳ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 55 ರನ್ಗಳಾಗುವಷ್ಟರಲ್ಲಿ ರೋಹಿತ್(21), ಕೆಎಲ್ ರಾಹುಲ್(5) ಮತ್ತು ನಾಯಕ ವಿರಾಟ್ ಕೊಹ್ಲಿ(20) ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಆದರೆ ರಹಾನೆ ಮತ್ತು ಪೂಜಾರ ಜೋಡಿ ಜವಾಬ್ದಾರಿಯುತ ಆಟದ ನೆರವಿನಿಂದ ಅಲ್ಪ ಮೊತ್ತಕ್ಕೆ ಕುಸಿಯದಂತೆ ತಡೆಯಿತು.
100ರನ್ಗಳ ಜೊತೆಯಾಟ
56 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ರಹಾನೆ 4ನೇ ವಿಕೆಟ್ ಜೊತೆಯಾಟದಲ್ಲಿ ಚೇತೇಶ್ವರ್ ಪೂಜಾರ ಜೊತೆಗೂಡಿ 49.3 ಓವರ್ಗಳಲ್ಲಿ 100 ರನ್ಗಳ ಜೊತೆಯಾಟ ನೀಡಿದರು. ನಿಧಾನಗತಿ ಬ್ಯಾಟಿಂಗ್ ಮಾಡಿದ ಪೂಜಾರ 206 ಎಸೆತಗಳಲ್ಲಿ 4 ಬೌಂಡರಿ ಸಹಿತ 45 ರನ್ಗಳಿಸಿದರೆ, ರಹಾನೆ 146 ಎಸೆತಗಳಲ್ಲಿ 5 ಬೌಂಡರಿ ಸಹಿತ 61 ರನ್ಗಳಿಸಿದರು.
ಆದರೆ ಇವರಿಬ್ಬರು ಕೇವಲ 3 ಓವರ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದ್ದರು. ನಂತರ ಬಂದ ಜಡೇಜಾ ಕೂಡ ಕೇವಲ 3 ರನ್ಗಳಿಸಿ ಮೊಯೀನ್ ಅಲಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಇದೀಗ ಕೊನೆ ದಿನದ ಆಟ ಬಾಕಿ ಉಳಿದಿದ್ದು, ಭಾರತಕ್ಕೆ ರಿಷಭ್ ಪಂತ್ ಏಕಾಂಗಿ ಬಲವಾಗಿದ್ದಾರೆ. ಪ್ರಸ್ತುತ 153 ರನ್ಗಳ ಮುನ್ನಡೆ ಹೊಂದಿದ್ದು, ಕೊನೆಯ ದಿನ ಎಷ್ಟು ರನ್ಗಳಿಸಲಿದೆ ಎಂಬುದರ ಮೇಲೆ ಪಂದ್ಯದ ಗೆಲುವು ಸೋಲು ನಿಂತಿದೆ.
ಇಂಗ್ಲೆಂಡ್ ಪರ ಮಾರ್ಕ್ ವುಡ್ 40ಕ್ಕೆ 3, ಮೊಯೀನ್ ಅಲಿ 52ಕ್ಕೆ 2, ಸ್ಯಾಮ್ ಕರ್ರನ್ 30ಕ್ಕೆ ಒಂದು ವಿಕೆಟ್ ಪಡೆದರು.