ಲಂಡನ್: ಲೀಗ್ ಪಂದ್ಯಗಳಲ್ಲಿ ಆಡಿ ಗಾಯಕ್ಕೆ ತುತ್ತಾಗಿ ರಾಷ್ಟ್ರೀಯ ತಂಡದಿಂದ ಒಂದು ವರ್ಷಕ್ಕೂ ಹೆಚ್ಚು ಕಾಲ ಹೊರಗುಳಿದಿದ್ದ ಜೋಫ್ರಾ ಆರ್ಚರ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಬಿಟ್ಟುಬಿಡುವಂತೆ ಹೇಳಿದೆ ಎಂದು ವರದಿಯಾಗಿದೆ. 2024ರ ವಿಶ್ವಕಪ್ ವೇಳೆಗೆ ಜೋಫ್ರಾ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಲಭ್ಯರಾಗಿರಬೇಕು ಎಂಬ ಉದ್ದೇಶಕ್ಕೆ ಇಸಿಬಿ ಈ ಸೂಚನೆ ನೀಡಿದಂತಿದೆ.
ಗಾಯಕ್ಕೆ ತುತ್ತಾಗಿದ್ದ ಆರ್ಚರ್ ಇತ್ತೀಚೆಗೆ ಚೇತರಿಸಿಕೊಂಡಿದ್ದಾರೆ ಮತ್ತೆ ಲೀಗ್ ಪಂದ್ಯಗಳಲ್ಲಿ ಆಡುವುದು ಮತ್ತು ಒತ್ತಡದ ಸಮಯದಲ್ಲಿ ಗಾಯಕ್ಕೆ ತುತ್ತಾದರೆ ರಾಷ್ಟ್ರೀಯ ತಂಡಕ್ಕೆ ಸಮಸ್ಯೆ ಆಗುತ್ತದೆ. ಹಾಗೇ ಐಪಿಎಲ್ ಮುಗಿದ ಬೆನ್ನಲ್ಲೇ ವಿಶ್ವಕಪ್ ಇರುವುದರಿಂದ ಚೇತರಿಕೆ ಮತ್ತು ವಿಶ್ರಾಂತಿಗೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಈ ಸೂಚನೆ ನೀಡಿದೆ.
2022ರ ಐಪಿಎಲ್ಗೆ ಮುಂಚಿತವಾಗಿ 8 ಕೋಟಿ ರೂಪಾಯಿಗಳಿಗೆ ಮುಂಬೈ ಇಂಡಿಯನ್ಸ್ ಆರ್ಚರ್ ಅವರನ್ನು ಖರೀದಿಸಿತ್ತು. ಕಳೆದ ವಾರ ಫ್ರಾಂಚೈಸಿ ಆರ್ಚರ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ಹರಾಜಿಗೆ ನೋಂದಾಯಿಸಿದ ಆಟಗಾರರ ಪಟ್ಟಿಯಲ್ಲಿ ಅರ್ಚರ್ ಅವರ ಹೆಸರಿಲ್ಲ. ಹೀಗಾಗಿ ಇಸಿಬಿ ಸೂಚನೆಯ ಮೇರೆಗೆ ಆರ್ಚರ್ ಹಿಂದೆ ಸರಿದಿದ್ದಾರೆ ಎನಿಸುತ್ತಿದೆ.
ಗಾಯಗಳಿಂದ ಬಳಲುತ್ತಿದ್ದ ಆರ್ಚರ್ ಚೇತರಿಸಿಕೊಂಡು ಮರಳಿದ್ದರು. ಆದರೆ ಮೇ ತಿಂಗಳಲ್ಲಿ ಐಪಿಎಲ್ನಲ್ಲಿ ಎಂಐ ಪರ ಆಡುವಾಗ ಮತ್ತೆ ಮೊಣಕೈ ಒತ್ತಡದ ಮುರಿತಕ್ಕೆ ಒಳಗಾದರು. 28 ವರ್ಷದ ಬಾರ್ಬಡೋಸ್ ಮೂಲದ ಕ್ರಿಕೆಟಿಗ ಅಂದಿನಿಂದ ಯಾವುದೇ ವೃತ್ತಿಪರ ಕ್ರಿಕೆಟ್ ಆಡಿಲ್ಲ ಮತ್ತು ಇದರಿಂದ ಏಕದಿನ ವಿಶ್ವಕಪ್ ಆಡುವುದನ್ನು ತಪ್ಪಿಸಿಕೊಂಡರು.