ನವದೆಹಲಿ: ಇತ್ತೀಚಿಗೆ ಟೋಕಿಯೋದಲ್ಲಿ ಮುಕ್ತಾಯವಾದ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಭಿನಂದಿಸಿದ್ದು, ಕೋವಿಡ್ ಸಾಂಕ್ರಾಮಿಕದ ಸಮಯದಲ್ಲೂ ದೇಶದ ಜನತೆ ಸಂಭ್ರಮಾಚರಣೆ ಮಾಡಲು ನೀವು ಕಾರಣರಾಗಿದ್ದೀರಾ ಎಂದು ಪ್ರಶಂಸಿಸಿದ್ದಾರೆ.
ಶನಿವಾರ ಕೋವಿಂದ್ ಅವರು ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್ಗಳಿಗೆಲ್ಲಾ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಚಹಾ ಕೂಟ ಆಯೋಜಿಸಿದ್ದರು.
ರಾಷ್ಟ್ರಕ್ಕೆ ಕೀರ್ತಿ ತಂದಿದ್ದಕ್ಕಾಗಿ ಇಡೀ ದೇಶವು ನಮ್ಮ ಒಲಿಂಪಿಯನ್‌ಗಳ ಬಗ್ಗೆ ಹೆಮ್ಮೆಪಡುತ್ತದೆ. ಈ ತಂಡ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಹೆಚ್ಚು ಪದಕಗಳನ್ನು ತಂದುಕೊಟ್ಟಿದೆ. ಇಡೀ ದೇಶ ಇದಕ್ಕಾಗಿ ಗರ್ವ ಪಡುತ್ತಿದೆ. ನಿಮಗೆಲ್ಲಾ ಅಭಿನಂದನೆಗಳು ಎಂದು ರಾಮ್ನಾಥ್ ಕೋವಿಂದ್ ಭಾರತೀಯ ಕ್ರೀಡಾಪಟುಗಳನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
"ಅನೇಕ ಸಮಸ್ಯೆಗಳನ್ನು ಎದುರಿಸಿದ ನಂತರವೂ ವಿಶ್ವದರ್ಜೆಯ ಆಟ ಪ್ರದರ್ಶಿಸಿದ ಹೆಣ್ಣು ಮಕ್ಕಳ ಬಗ್ಗೆ ನಾವು ವಿಶೇಷವಾಗಿ ಸಂಪೂರ್ಣ ರಾಷ್ಟ್ರ ಸಂಭ್ರಮವನ್ನು ಆಚರಿಸಲು ನೀವು ಕಾರಣವಾಗಿದ್ದೀರಿ. ದೇಶದ 130 ಕೋಟಿ ಜನರು ನಿಮ್ಮ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ. ಆನಂದದಿಂದ ನಿಮ್ಮನ್ನು ಬೆಂಬಲಿಸಿದ್ದಾರೆ. ನೀರಜ್ ಚೋಪ್ರಾ ಅವರಿಂದ ತುಂಬಾ ವರ್ಷಗಳ ನಂತರ ನಮ್ಮ ದೇಶದ ಧ್ವಜವನ್ನು ಮೇಲ್ಭಾಗದಲ್ಲಿ ಹಾರಿಸಲಾಯಿತು ಮತ್ತು ರಾಷ್ಟ್ರಗೀತೆಯನ್ನು ಹಾಡಿಸಲಾಯಿತು" ಎಂದು ಕೋವಿಂದ್ ಪದಕ ಗೆದ್ದವರನ್ನು ಹೊಗಳಿದರು.
ಇದೇ ಸಂದರ್ಭದಲ್ಲಿ ಆಟಗಾರರ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ತರಬೇತುದಾರರು, ಬೆಂಬಲ ಸಿಬ್ಬಂದಿ, ಕುಟುಂಬ ಸದಸ್ಯರು ಮತ್ತು ಹಿತೈಷಿಗಳನ್ನು ನಾನು ಮೊದಲು ಪ್ರಶಂಸಿಸುತ್ತೇನೆ. ಮತ್ತೊಮ್ಮೆ ನಿಮಗೆಲ್ಲಾ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ಸೃಷ್ಟಿಸಲಿ ಎಂದು ಹಾರೈಸುತ್ತೇನೆ ಎಂದು ರಾಷ್ಟ್ರಪತಿ ತಿಳಿಸಿದ್ದಾರೆ.
ಇದನ್ನು ಓದಿ:ಒಲಿಂಪಿಕ್ಸ್ ಚಿನ್ನದ ಹುಡುಗ ನೀರಜ್ ಚೋಪ್ರಾಗೆ ವಿಪರೀತ ಜ್ವರ.. ಕೋವಿಡ್ ವರದಿ ನೆಗೆಟಿವ್!