ಬೆಂಗಳೂರು: ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆಧಾರವಾಗುವ ಭಾರತದ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ದುಲೀಪ್ ಟ್ರೋಫಿ ಫೈನಲ್ ಇಂದು ಬೆಳಗ್ಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಹನುಮ ವಿಹಾರಿ ನಾಯಕತ್ವದ ದಕ್ಷಿಣ ವಲಯ ಮತ್ತು ಪ್ರಿಯಾಂಕ್ ಪಾಂಚಾಲ್ ಮುಂದಾಳತ್ವದ ಪಶ್ಚಿಮ ವಲಯ ತಂಡಗಳು ಪ್ರತಿಷ್ಟಿತ ಪ್ರಶಸ್ತಿ ಗೆಲ್ಲಲು ಪೈಪೋಟಿ ನಡೆಸಲಿವೆ.
ಜುಲೈ 5ರಿಂದ 8ರ ವರೆಗೆ ನಡೆದ ಸೆಮಿಫೈನಲ್ನಲ್ಲಿ ಪಶ್ಚಿಮ ವಲಯ ಮತ್ತು ಕೇಂದ್ರ ವಲಯ ಹಾಗೂ ಉತ್ತರ ವಲಯ ಮತ್ತು ದಕ್ಷಿಣ ವಲಯ ಮುಖಾಮುಖಿಯಾಗಿದ್ದವು. ಪಂದ್ಯ ಡ್ರಾ ಮೂಲಕ ಕೊನೆಗೊಂಡರೂ ಹೆಚ್ಚಿನ ಪಾಯಿಂಟ್‌ಗಳಿಂದಾಗಿ ಪಶ್ಚಿಮ ವಲಯ ಫೈನಲ್ಗೆ ಬಂದರೆ, ಉತ್ತರ ವಲಯವನ್ನು ಮಣಿಸಿ ದಕ್ಷಿಣ ವಲಯ ಅಂತಿಮ ಘಟ್ಟ ಪ್ರವೇಶಿಸಿತ್ತು.
ಯಾರ ಮೇಲೆ ಹೆಚ್ಚು ನಿರೀಕ್ಷೆ?:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದ ಚೇತೇಶ್ವರ ಪೂಜಾರ ಅವರನ್ನು ವೆಸ್ಟ್ ಇಂಡೀಸ್ ಪ್ರವಾಸದಿಂದ ಕೈಬಿಡಲಾಗಿದೆ. ಇದಾದ ನಂತರ 35 ವರ್ಷದ ಅನುಭವಿ ಬ್ಯಾಟರ್ ದೇಶಿ ಕ್ರಿಕೆಟ್ ಆಡುವ ಮೂಲಕ ಮತ್ತೆ ಫಾರ್ಮ್ ಕಂಡುಕೊಂಡು ಅಂತಾರಾಷ್ಟ್ರೀಯ ತಂಡದ ಕದ ತಟ್ಟುವ ಚಿಂತನೆಯಲ್ಲಿದ್ದಾರೆ. ಹೀಗಾಗಿ, ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯದ ಪರ ಆಡುತ್ತಿದ್ದಾರೆ.
ಅದರಂತೆ, ಸೆಮಿಫೈನಲ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 102 ಎಸೆತ ಎದುರಿಸಿ 28 ರನ್ ಮಾಡಿದರೆ ಎರಡನೇ ಇನ್ನಿಂಗ್ಸ್ನಲ್ಲಿ 278 ಎಸೆತಗಳಲ್ಲಿ 133 ರನ್ ಕಲೆಹಾಕಿದರು. ಇವರ ಶತಕದ ನೆರವಿನಿಂದ ಭಾರಿ ಮುನ್ನಡೆ ಪಡೆದುಕೊಂಡ ಪಶ್ಚಿಮ ವಲಯ ಗೆಲುವು ಸಾಧಿಸಿತ್ತು.
ಬಾರ್ಡರ್- ಗವಾಸ್ಕರ್ ಟ್ರೋಫಿಯಲ್ಲಿ ಒಂದು ಅಂತಾರಾಷ್ಟ್ರಿಯ ಟೆಸ್ಟ್ ಆಡಿರುವ ಸೂರ್ಯ ಕುಮಾರ್ ಯಾದವ್ ಸಹ ಪಶ್ಚಿಮ ವಲಯಕ್ಕಾಗಿ ಆಡುತ್ತಿದ್ದು, ಸೆಮೀಸ್ನಲ್ಲಿ 7 ಮತ್ತು 52 ರನ್ನಿಂದ ಟೆಸ್ಟ್ ಮಾದರಿಗೆ ಒಗ್ಗಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಟಿ20 ಅಗ್ರ ಶ್ರೇಯಾಂಕದ ಬ್ಯಾಟರ್, ಇಂಗ್ಲೆಂಡ್ನ ಬೇಸ್ ಬಾಲ್ ನೀತಿಯಂತೆ ಬ್ಯಾಟ್ ಬೀಸುತ್ತಿದ್ದಾರೆ. ಇವರ ಜೊತೆಗೆ, ಪಶ್ಚಿಮ ವಲಯದಲ್ಲಿರುವ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಪೃಥ್ವಿ ಶಾ ಅವರ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ದೇಶಿ ಟೂರ್ನಿಯಲ್ಲಿ ಕಳೆದ ವರ್ಷಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ ಮೇಲೂ ಸಾಕಷ್ಟು ನಿರೀಕ್ಷೆಗಳಿವೆ.