ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿಯ ಫೈನಲ್ ಪಂದ್ಯಾಟದಲ್ಲಿ ದಕ್ಷಿಣ ವಲಯವು ಪಶ್ಚಿಮ ವಲಯವನ್ನು 75 ರನ್ಗಳಿಂದ ಸೋಲಿಸಿತು. 298 ರನ್ಗಳ ಗುರಿ ಬೆನ್ನತ್ತಿದ್ದ ಪಶ್ಚಿಮ ವಲಯ ತಂಡ ಶನಿವಾರ ದಿನದಂತ್ಯಕ್ಕೆ 182 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ ದಿನ ಮತ್ತೆ ಬ್ಯಾಟ್ ಬೀಸಿದ ಪಶ್ಚಿಮ ವಲಯವು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿತು. ಈ ಮೂಲಕ 222 ರನ್‌ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡ ಪಶ್ಚಿಮ ವಲಯ ಅಂತಿಮವಾಗಿ ದಕ್ಷಿಣ ವಲಯಕ್ಕೆ ಶರಣಾಯಿತು. ಈ ಮೂಲಕ 14 ನೇ ಬಾರಿಗೆ ದಕ್ಷಿಣ ವಲಯವು ದುಲೀಪ್ ಟ್ರೋಫಿಗೆ ಮುತ್ತಿಕ್ಕಿತು.
ಮೊದಲ ಇನ್ನಿಂಗ್ಸ್ :ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 213 ರನ್ ಕಲೆ ಹಾಕಿತು. ಆರಂಭಿಕರಾಗಿ ಆಗಮಿಸಿದ ರವಿಕುಮಾರ್ ಸಮರ್ಥ ಮತ್ತು ಮಾಯಾಂಕ್ ಅಗರ್ವಾಲ್ ಉತ್ತಮ ಆರಂಭ ನೀಡಲಿಲ್ಲ. ರವಿಕುಮಾರ್ ಸಮರ್ಥ್ 7 ರನ್ ಗಳಿಸಿ ಚಿಂತನ್‌ಗೆ ವಿಕೆಟ್ ಒಪ್ಪಿಸಿದರೆ, ಮಾಯಾಂಕ್ 28 ರನ್ ಗಳಿಸಿ ಅತಿತ್ ಸೇಠ್ಗೆ ವಿಕೆಟ್ ನೀಡಿದರು.
ಬಳಿಕ ಆಗಮಿಸಿದ ನಾಯಕ ಹನುಮ ವಿಹಾರಿ ಮತ್ತು ತಿಲಕ್ ವರ್ಮಾ ಸ್ವಲ್ಪ ಮಟ್ಟಿಗೆ ತಂಡಕ್ಕೆ ಚೇತರಿಕೆ ಕೊಟ್ಟರು. ಹನುಮ ವಿಹಾರಿ 9 ಬೌಂಡರಿಗಳೊಂದಿಗೆ 63 ರನ್ ಗಳಿಸಿದರೆ, ತಿಲಕ್ ವರ್ಮಾ 40 ರನ್ ಸೇರಿಸಿ ಓಟಾದರು. ನಂತರದಲ್ಲಿ ರಿಕ್ಕಿ (9 ರನ್), ಸಚಿನ್ ಬೇಬಿ (7) , ವಾಷಿಂಗ್ಟನ್ ಸುಂದರ್ (22), ಸಾಯಿ ಕಿಶೋರ್(5), ವೈಶಾಖ್ (13), ವಿದ್ವತ್ ಕಾವೇರಪ್ಪ (8) ರನ್ ಗಳಿಸಿದರು. ಈ ಮೂಲಕ ದಕ್ಷಿಣ ವಲಯವು 213 ರನ್ ಗಳಿಸಿತು. ಪಶ್ಚಿಮ ವಲಯ ಪರ, ಶಾಮ್ಸ್ ಮುಲಾನಿ 3 ವಿಕೆಟ್, ಅರ್ಜಾನ್, ಚಿಂತನ್ ಗಾಜಾ, ಧರ್ಮೇಂದ್ರ ಸಿಂಗ್ ಜಡೇಜಾ ತಲಾ 2 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಪಶ್ಚಿಮ ವಲಯ 146 ರನ್‌ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಆರಂಭಿಕ ಪೃಥ್ವಿ ಶಾ 9 ಬೌಂಡರಿಗಳೊಂದಿಗೆ 65 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ಪ್ರಿಯಾಂಕ್ ಪಾಂಚಾಲ್ ನಾಯಕನ ಆಟ ಆಡಲಿಲ್ಲ. ಕೇವಲ 11 ರನ್ ಗಳಿಸಿದ ಪ್ರಿಯಾಂಕ್, ವಿ. ಕೌಶಿಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಯಾವೊಬ್ಬ ಆಟಗಾರನೂ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಟಿ20 ಪ್ರಮುಖ ಬ್ಯಾಟರ್ ಸೂರ್ಯ ಕುಮಾರ್ ಯಾದವ್ 8 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಇದರಿಂದಾಗಿ ಪಶ್ಚಿಮ ವಲಯ 146 ರನ್ಗೆ ಆಲೌಟ್ ಆಯಿತು.