ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳೆ ಭಾರತ ತಂಡಕ್ಕೆ ಮೂರು ಮಾದರಿಯ ಕ್ರಿಕೆಟ್ಗೆ ಹೊಸ ಜರ್ಸಿ ಅನಾವರಣಗೊಳಿಸಲಾಗಿತ್ತು. ಪಂದ್ಯದಲ್ಲಿ ಅಡಿಡಾಸ್ ಕಂಪನಿಯ ಕಿಟ್ನೊಂದಿಗೆ ಆಟಗಾರರು ಮೈದಾನಕ್ಕಿಳಿದಿದ್ದರು. ಈ ವರ್ಷ ಏಕದಿನ ವಿಶ್ವಕಪ್ ನಡೆಯಲಿದ್ದು, ಹೊಸ ಜರ್ಸಿಯಲ್ಲಿ ತಂಡ ಆಡಲಿದೆ.
ಆದರೆ ಹೊಸ ಜರ್ಸಿಯ ಎದೆಯ ಭಾಗದಲ್ಲಿ ಜಾಹೀರಾತು ಕಾಣಿಸದು. ಬಿಸಿಸಿಐ ಜೊತೆಗೆ ಈ ಹಿಂದೆ ಬೈಜುಸ್ ಮಾಡಿಕೊಂಡಿರುವ ಒಪ್ಪಂದ ಮುಕ್ತಾಯವಾಗಿದ್ದು, ಬೇರೆ ಪಾಲುದಾರಿಕೆಯನ್ನು ಎದುರು ನೋಡುತ್ತಿದೆ. ಈಗಾಗಲೇ ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್ 11 ನೊಂದಿಗೆ ಒಪ್ಪಂದವಾಗಿದೆ ಎಂದೂ ಸಹ ಹೇಳಲಾಗುತ್ತಿದೆ. ಆದರೆ ಬಿಸಿಸಿಐ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಬಲ್ಲ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ.
ಆನ್‌ಲೈನ್ ಎಜುಕೇಶನ್ ಪ್ಲ್ಯಾಟ್‌ಫಾರ್ಮ್ ಬೈಜುಸ್ ನವೆಂಬರ್ವರೆಗೆ ಬಿಸಿಸಿಐನೊಂದಿಗೆ ಐಚ್ಛಿಕ ಒಪ್ಪಂದ ಹೊಂದಿತ್ತು. ಆದರೆ ಮಾರ್ಚ್‌ನಲ್ಲಿ ಈ ಒಪ್ಪಂದದಿಂದ ನಿರ್ಗಮಿಸಲು ನಿರ್ಧರಿಸಿತ್ತು. ಹೀಗಾಗಿ ಟೀಂ ಇಂಡಿಯಾ ಜರ್ಸಿಗೆ ಪ್ರಾಯೋಜಕರಿಲ್ಲದೇ ಇತ್ತೀಚೆಗೆ ಲಂಡನ್ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ತಂಡ ಆಡಿದೆ.
ಬೈಜುಸ್ 2018ರಲ್ಲಿ ಕೊನೆಯ ಅವಧಿಗೆ ಸುಮಾರು 287 ಕೋಟಿ ರೂ ಪಾವತಿಸಿದ್ದಾರೆ. ಎಡ್-ಟೆಕ್ ಕಂಪನಿಯು ನಂತರ ಒಪ್ಪಂದವನ್ನು 2023ಕ್ಕೆ ವಿಸ್ತರಿಸಿ ಸುಮಾರು 450 ಕೋಟಿ ರೂ ಪಾವತಿಸಿತ್ತು. ಈ ಒಪ್ಪಂದದ ಪ್ರಕಾರ ಬೈಜೂಸ್ ದ್ವಿಪಕ್ಷೀಯ ಪಂದ್ಯಗಳಿಗೆ 5.5 ಕೋಟಿ ಮತ್ತು ಐಸಿಸಿ ಆಟಕ್ಕೆ 1.7 ಕೋಟಿ ರೂ. ಬಿಸಿಸಿಐಗೆ ಕೊಡುತ್ತಿತ್ತು. ಐಸಿಸಿ ಟೂರ್ನಮೆಂಟ್‌ಗಳಲ್ಲಿ ತಂಡಗಳಿಗೆ ಜರ್ಸಿಯ ಮುಂಭಾಗದಲ್ಲಿ ಪ್ರಾಯೋಜಕರ ಲೋಗೋ ಹಾಕಲು ಅನುಮತಿಸಲಾಗುವುದಿಲ್ಲ ಎಂಬುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಡ್ರೀಮ್ 11 ಜೊತೆಗೆ ಭಾರತೀಯ ಕ್ರಿಕೆಟ್ ಮಂಡಳಿ ಬೈಜುಸ್‌ಕ್ಕಿಂತ ಕಡಿಮೆ ಮೊತ್ತಕ್ಕೆ ಜರ್ಸಿ ಪ್ರಾಯೋಜಕತ್ವದ ಹಕ್ಕು ನೀಡುತ್ತಿದೆ ಎನ್ನಲಾಗಿದೆ.
ಜಿರ್ಸಿ ಸ್ಪಾನ್ಸರ್ನ ಮೂಲ ಬೆಲೆಯನ್ನು ಕಡಿಮೆ ಮಾಡಿದರೂ ಪ್ರಯೋಜಕರ ಆಸ್ತಿಯ ಕೊರತೆ ಕಂಡುಬಂದಿದೆ. ಬಿಸಿಸಿಐ ಜೂನ್ 14ರಂದು ಪ್ರಕಟಣೆ ಹೊರಡಿಸಿದ್ದು, ಕೆಲವು ನಿಯಮಗಳನ್ನು ಪ್ರಾಯೋಜಕರಿಗೆ ಹೇರಲಾಗಿದೆ. ನಿಯಮದಲ್ಲಿ ರಿಯಲ್ ಮನಿ ಗೇಮಿಂಗ್ಗೆ ನಿಷೇಧ ಇದ್ದರೂ ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ಗೆ ವಿನಾಯಿತಿ ನೀಡಲಾಗಿದೆ. ಇದರಿಂದಾಗಿ ಡ್ರೀಮ್ 11 ಪ್ರಯೋಜಕತ್ವಕ್ಕೆ ಮುಂದೆ ಬಂದಿದೆ ಎಂದು ತಿಳಿದುಬಂದಿದೆ.
ವಿಲ್ಸ್, ಐಟಿಸಿಯಿಂದ ಡ್ರೀಮ್11 ವರೆಗೆ..:ವಿಲ್ಸ್ ಮತ್ತು ಐಟಿಸಿ 90ರ ದಶಕದಲ್ಲಿ ಜರ್ಸಿಗಳ ಪ್ರಾಯೋಜಕರಾಗಿದ್ದರು. ನಂತರ ಸಹಾರಾ ಮಂಡಳಿ ಹೆಚ್ಚು ಪಾಯೋಜಕರಾಗಿ ಉಳಿದರು. ಸುಬ್ರತಾ ರಾಯ್ ನೇತೃತ್ವದ ಸಹರಾ ಸಂಸ್ಥೆ 2002ರಿಂದ 2013ರ ವರೆಗೆ ಸುಮಾರು 11 ವರ್ಷಗಳ ಕಾಲ ಪ್ರಯೋಜಕತ್ವ ಹೊಂದಿತ್ತು. 2014 ರಿಂದ 17ರ ವರೆಗೆ ಸ್ಟಾರ್ ಇಂಡಿಯಾ ಸ್ಪಾನ್ಸರ್ ಆಗಿತ್ತು, ನಂತರ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಒಪ್ಪೋ (Oppo) ಹಕ್ಕುಗಳನ್ನು ಪಡೆದುಕೊಂಡಿತ್ತು. ಒಪ್ಪೋ ಬಳಿಕ ಆನ್‌ಲೈನ್ ಲರ್ನಿಂಗ್ ಪ್ಲಾಟ್‌ಫಾರ್ಮ್ ಬೈಜುಸ್ ಪ್ರಾಯೋಜಕರಾಗಿದ್ದರು.
ಇದನ್ನೂ ಓದಿ:Nathan Lyon: ದಾಖಲೆಯ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ನಾಥನ್ ಲಿಯಾನ್