ನವದೆಹಲಿ: ಐಪಿಎಲ್ 2ನೇ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್, ತಂಡದ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಇಬ್ಬರೂ ತಮ್ಮನ್ನು ಟೂರ್ನಿಯುದ್ದಕ್ಕೂ ಉತ್ತಮವಾಗಿ ಬೆಂಬಲಿಸಿದರು ಎಂದು ಹೇಳಿದ್ದಾರೆ.
ಇತ್ತೀಚೆಗೆ ಮುಗಿದ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ 36 ರನ್ ಸಿಡಿಸಿದ ವೆಂಕಟೇಶ್ ಅಯ್ಯರ್ ಬೌಲಿಂಗ್ನಲ್ಲಿ 1 ವಿಕೆಟ್ ಪಡೆದಿದ್ದರು. ಕೊನೆಯ ಪಂದ್ಯದಲ್ಲಿ ಮಾತ್ರ ಅವರಿಗೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲವಾದರೂ, ಅಯ್ಯರ್ ಒಬ್ಬ ಪ್ರತಿಭಾವಂತ ಎಂದು ಸ್ವತಃ ನಾಯಕ ರೋಹಿತ್ ಶರ್ಮಾ ಹೇಳಿದ್ದು, ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದರು.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಪದಾರ್ಪಣೆ ಸರಣಿಯ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಮುಖ್ಯಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪದಾರ್ಪಣೆ ಸರಣಿ ಜಯ ತುಂಬಾ ವಿಶೇಷ
"ನನ್ನ ಪಾಲಿಗೆ ಇದೊಂದು ಸ್ಮರಣೀಯ ಸರಣಿ. ಭಾರತದ ಜರ್ಸಿ ತೊಡುವ ಕನಸು ನನಸಾಗಿದೆ. ಅದರಲ್ಲೂ ಪದಾರ್ಪಣೆ ಸರಣಿಯನ್ನ ಕ್ಲೀನ್ ಸ್ವೀಪ್ ಮೂಲಕ ಗೆದ್ದಿರುವುದು ತುಂಬಾ ಖುಷಿಯಾಗಿದೆ" ಎಂದು ಅಯ್ಯರ್ ಹೇಳಿಕೊಂಡಿದ್ದಾರೆ.
ಸರಣಿ ಗೆದ್ದ ಬಳಿಕ ಟ್ರೋಫಿ ಸೆಲೆಬ್ರೇಷನ್ ವೇಳೆ ರೋಹಿತ್ ಭಾಯ್ ನನ್ನ ಬಳಿ ಬಂದು ಟ್ರೋಫಿಯನ್ನು ನನಗೆ ನೀಡಿ ಉತ್ತಮವಾಗಿ ಆಡಿದ್ದೀಯಾ ಎಂದರು. ಗೆಲುವಿನ ಟ್ರೋಫಿಯನ್ನು ಹಿಡಿಯುವುದು ಭಾವನಾತ್ಮಕ ಮತ್ತು ಗೌರವದ ಕ್ಷಣ. ನನಗೆ ತಂಡದಲ್ಲಿ ಹಿರಿಯ ಆಟಗಾರರಿಂದ ಸಾಕಷ್ಟು ಬೆಂಬಲ ಸಿಕ್ಕಿತು. ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ದ್ರಾವಿಡ್ ಸರ್ ತುಂಬಾ ಪ್ರೋತ್ಸಾಹ ನೀಡಿದರು ಎಂದು ಆಲ್ರೌಂಡರ್ ಹೇಳಿಕೊಂಡಿದ್ದಾರೆ.
ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ಕ್ರಿಕೆಟಿಗನಾಗಿ ನಾನು ತಂಡದಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸಲು ಸಿದ್ಧನಿದ್ದೇನೆ. ನಾಯಕ ಚೆಂಡನ್ನು ನೀಡಿದಾಗ ಕೆಲವು ಓವರ್ಗಳನ್ನು ಮಾಡಿ ವಿಕೆಟ್ ಪಡೆಯಲು ಪ್ರಯತ್ನಿಸುತ್ತೇನೆ. ಮತ್ತು ನಾಯಕ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಹೇಳುತ್ತಾರೇ ಆ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಅಗತ್ಯವಾದ ರನ್ಗಳಿಸುತ್ತೇನೆ ಎಂದು 26 ವರ್ಷದ ಕ್ರಿಕೆಟರ್ ತಿಳಿಸಿದ್ದಾರೆ.
ಡ್ರೆಸಿಂಗ್ ರೂಮಿನಲ್ಲಿ ಸದಾ ಶಾಂತಿ ನೆಲೆಸಲು ದ್ರಾವಿಡ್-ರೋಹಿತ್ ಪ್ರಯತ್ನಿಸುತ್ತಾರೆ:
ದ್ರಾವಿಡ್ ಮತ್ತು ರೋಹಿತ್ ಡ್ರೆಸ್ಸಿಂಗ್ ರೂಮ್ ಅನ್ನು ಸದಾ ಶಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತಾರೆ. ರಾಹುಲ್ ಸರ್ ಆಟದ ಲೆಜೆಂಡ್ ಆಗಿದ್ದಾರೆ. ಅವರು ಭಾರತಕ್ಕಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಅವರು ಯುವ ಕ್ರಿಕೆಟಿಗರನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಚೆನ್ನಾಗಿ ಬಲ್ಲರು. ನಾನು ಕೂಡ ಅವರಿಂದ ಸಾಕಷ್ಟು ಬೆಂಬಲ ಪಡೆದಿದ್ದೇನೆ. ಸರಣಿಯ ಅತ್ಯುತ್ತಮ ಭಾಗವೆಂದರೆ ರೋಹಿತ್ ಮತ್ತು ರಾಹುಲ್ ಸರ್ ಡ್ರೆಸಿಂಗ್ ರೂಮಿನಲ್ಲಿ ಸದಾ ಶಾಂತಿ ನೆಲೆಸಿರುವಂತೆ ನೋಡಿಕೊಳ್ಳುತ್ತಾರೆ ಮತ್ತು ಪ್ರತಿಯೊಬ್ಬರ ಆಟಗಾರರನ್ನು ಪ್ರೇರೇಪಿಸುತ್ತಾರೆ. ರಾಹುಲ್ ಸರ್ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡುವುದಕ್ಕೆ ಸಂಪೂರ್ಣ ಸ್ವಾಂತಂತ್ರ್ಯ ನೀಡಿದ್ದಾರೆ. ಅವರಿಗೆ ನನ್ನ ಸಾಮರ್ಥ್ಯದ ಮೇಲೆ ಸಾಕಷ್ಟು ವಿಶ್ವಾಸವಿದೆ ಎಂದು ಅಯ್ಯರ್ ಹೇಳಿದ್ದಾರೆ.
ಇದನ್ನೂ ಓದಿ: NZ VS IND: ಹರ್ಷಲ್, ವೆಂಕಟೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಾಯಕ ರೋಹಿತ್