ಅಡಿಲೇಡ್:ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರು ಮುಂಬರುವ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಭಾರತದ ಹಂಗಾಮಿ ಮುಖ್ಯ ಕೋಚ್ ಆಗಿ ಕಣಕ್ಕಿಳಿಯಲಿದ್ದಾರೆ. ರಾಹುಲ್ ದ್ರಾವಿಡ್ ಈ ಸರಣಿಗೆ ವಿಶ್ರಾಂತಿ ತೆಗೆದುಕೊಳ್ಳಿದ್ದಾರೆ.
ಗುರುವಾರ ನಡೆದ ಟಿ20 ವಿಶ್ವಕಪ್‌ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಹೀನಾಯ ಸೋತಿದ್ದು ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಗೆ ವಿಶ್ರಾಂತಿ ನೀಡಲಾಗಿದೆ. ಪರಿಣಾಮ ಅವರ ಸ್ಥಾನವನ್ನು ವಿವಿಎಸ್ ಲಕ್ಷ್ಮಣ್ ತುಂಬಲಿದ್ದಾರೆ.
ನವೆಂಬರ್ 18 ರಿಂದ ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗುವ ಮೂರು T20I ಹಾಗೂ ಏಕದಿನ ಪಂದ್ಯಗಳು ಒಳಗೊಂಡಂತೆ ಭಾರತವು ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಲಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಂತಹ ಹಿರಿಯ ಆಟಗಾರರಿಗೆ ಪ್ರವಾಸದಲ್ಲಿ ವಿಶ್ರಾಂತಿ ನೀಡಲಾಗಿದೆ. ಇವರ ಜೊತೆಗೆ ಟಿ20 ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ರಾಹುಲ್ ದ್ರಾವಿಡ್ ನೇತೃತ್ವದ ಕೋಚಿಂಗ್ ಸಿಬ್ಬಂದಿಗೂ ವಿಶ್ರಾಂತಿ ನೀಡಲಾಗಿದೆ.
ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್) ಮತ್ತು ಸಾಯಿರಾಜ್ ಬಹುತುಲೆ (ಬೌಲಿಂಗ್) ಸೇರಿದಂತೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ನೇತೃತ್ವದ ತಂಡವು ನ್ಯೂಜಿಲ್ಯಾಂಡ್ ತಂಡವನ್ನು ಸೇರಿಕೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಲಕ್ಷ್ಮಣ್ ಭಾರತ ತಂಡದ ಉಸ್ತುವಾರಿ ವಹಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜಿಂಬಾಬ್ವೆ ಮತ್ತು ಐರ್ಲೆಂಡ್ ಪ್ರವಾಸಗಳಲ್ಲಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಏಕದಿನ ಸರಣಿಗಳಲ್ಲಿ ಭಾರತಕ್ಕೆ ತರಬೇತಿ ನೀಡಿದ್ದರು. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ತಂಡದ ಜವಾಬ್ಧಾರಿ ವಹಿಸಿಕೊಳ್ಳಲಿದ್ದು, ಅನುಭವಿ ಆರಂಭಿಕ ಆಟಗಾರ ಶಿಖರ್ ಧವನ್ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಸರಣಿ ಬಳಿಕ ಭಾರತವು ಬಾಂಗ್ಲಾದೇಶದ ಪ್ರವಾಸ ಕೈಗೊಳ್ಳಲಿದ್ದು ರೋಹಿತ್ ಶರ್ಮಾ ಮತ್ತೆ ನಾಯಕರಾಗಿ ಆಗಮಿಸಲಿದ್ದಾರೆ. ಇವರ ಜೊತೆಗೆ ವಿರಾಟ್ ಕೊಹ್ಲಿ ಮತ್ತು ಅಶ್ವಿನ್ ಸಹ ತಂಡ ಸೇರಿಕೊಳ್ಳಲಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಭಾರತ ತಂಡ ಡಿಸೆಂಬರ್ 4 ರಿಂದ ಮೂರು ODI ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ:ಇದು ರೋಹಿತ್, ಕೊಹ್ಲಿ ನಿವೃತ್ತಿಯ ಬಗ್ಗೆ ಮಾತನಾಡುವ ಸಮಯವಲ್ಲ: ದ್ರಾವಿಡ್