ನವದೆಹಲಿ: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖಸ್ಥ ಸ್ಥಾನಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮರು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಭಾರತ ತಂಡದ ಕೋಚ್ ಆಗಲಿದ್ದಾರೆ ಎಂಬ ಅನುಮಾನಕ್ಕೆ ತೆರೆಬಿದ್ದಂತಾಗಿದೆ.
ಟಿ-20 ವಿಶ್ವಕಪ್ ಟೂರ್ನಿಯ ಬಳಿಕ ಕೋಚ್ ರವಿಶಾಸ್ತ್ರಿಯ ಅವಧಿ ಮುಕ್ತಾಯವಾಗುತ್ತಿದ್ದು, ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಎನ್ಸಿಎ ಅಧ್ಯಕ್ಷ ಸ್ಥಾನಕ್ಕೆ ದ್ರಾವಿಡ್ ಇದೀಗ ಮರು ಅರ್ಜಿ ಸಲ್ಲಿಸಿದ್ದಾರೆ.
ದ್ರಾವಿಡ್ ಅವರ ಎರಡು ವರ್ಷಗಳ ಒಪ್ಪಂದ ಮುಗಿದ ನಂತರ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಬೇಕಾಯಿತು. ಹೊಸ ನಿಯಮದ ಪ್ರಕಾರ ಹಳೆಯ ಅಧ್ಯಕ್ಷರ ವಿಸ್ತರಣೆಗೆ ಅವಕಾಶವಿಲ್ಲ. ಹೀಗಾಗಿ ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕಾದ ಹಿನ್ನೆಲೆ ಅರ್ಜಿ ಆಹ್ವಾನಿಸಿತ್ತು.
ನಾವು ದ್ರಾವಿಡ್ ಅವರನ್ನೇ ಉಳಿಸಿಕೊಳ್ಳಬೇಕಿದೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸೂಕ್ತ ಬೇರೊಬ್ಬರ ಹೆಸರಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ನಡುವೆ ಈ ಎನ್ಸಿಎ ಅಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಲು ದಿನಾಂಕವನ್ನು ಬಿಸಿಸಿಐ ವಿಸ್ತರಿಸಿದೆ. ರಾಹುಲ್ ದ್ರಾವಿಡ್ ಹೊರತುಪಡಿಸಿ ಬೇರಾರೂ ಈ ಹುದ್ದಗೆ ಅರ್ಜಿ ಸಲ್ಲಿಸಿಲ್ಲ. ಹೀಗಾಗಿ ಕೆಲ ದಿನಗಳ ವಿಸ್ತರಣೆ ಮಾಡಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದಿದೆ.