2022ರ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಾರಕ ಹಕ್ಕು ಪಡೆದಿದ್ದ ಡಿಸ್ನಿ ಸ್ಟಾರ್ ಇದೀಗ 2027 ರವರೆಗೆ ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡುವ ಹಕ್ಕನ್ನೂ ಗಳಿಸಿದೆ.
ಈ ಬಗ್ಗೆ ಐಸಿಸಿ ಮಾಹಿತಿ ನೀಡಿದ್ದು, 2027 ರವರೆಗೆ ಭಾರತದಲ್ಲಿ ನಡೆಯುವ ಐಸಿಸಿ ಕ್ರಿಕೆಟ್ ಪಂದ್ಯಾವಳಿಗಳನ್ನು ಪ್ರಸಾರ ಮಾಡುವ ಹಕ್ಕುಗಳನ್ನು ಡಿಸ್ನಿ ಸ್ಟಾರ್ ಪಡೆದಿದೆ. ಇದು ತನ್ನ ಟಿವಿ ಹಾಗೂ ಡಿಜಿಟಲ್ ವೇದಿಕೆಯಲ್ಲಿ ಐಸಿಸಿ ಪುರುಷ ಮತ್ತು ಮಹಿಳಾ ಪಂದ್ಯಗಳನ್ನು ಲೈವ್ ಸ್ಟ್ರೀಮ್ ಮಾಡಲಿದೆ ಎಂದು ಮಾಹಿತಿ ನೀಡಿದೆ.
ಡಿಸ್ನಿ ಪ್ರಸಾರ ಹಕ್ಕು ಪಡೆಯಲು ಎಷ್ಟು ಮೌಲ್ಯವನ್ನು ಹೂಡಿಕೆ ಮಾಡಿದೆ ಎಂಬ ಮಾಹಿತಿ ಬಹಿರಂಗಪಡಿಸಿಲ್ಲ. ವರದಿಗಳ ಪ್ರಕಾರ ಸಂಸ್ಥೆ 3 ಬಿಲಿಯನ್ ಡಾಲರ್ ಪಾವತಿಸಿದೆ ಎಂದು ಅಂದಾಜಿಸಲಾಗಿದೆ. ಈ ಹಿಂದೆ 2015-23 ರ ಅವಧಿಯಲ್ಲಿ 2.1 ಬಿಲಿಯನ್ ಡಾಲರ್ ನೀಡಿ ಪ್ರಸಾರ ಹಕ್ಕು ಪಡೆದಿತ್ತು. ಪ್ರಸಾರ ಹಕ್ಕಿಗೆ ಕರೆಯಲಾದ ಹರಾಜಿನಲ್ಲಿ ಸ್ಟಾರ್ ಸಂಸ್ಥೆ ಜೊತೆಗೆ ವಯಾಕಾಂ 18, ಸೋನಿ ಸ್ಪೋರ್ಟ್ಸ್, ಝೀ ಸಮೂಹಗಳು ಭಾಗವಹಿಸಿದ್ದವು.
"ಐಸಿಸಿ ಪಂದ್ಯಗಳ ಡಿಜಿಟಲ್ ಮತ್ತು ಟಿವಿ ಪ್ರಸಾರದ ಹಕ್ಕುಗಳನ್ನು ಪಡೆದಿರುವುದು ಸಂತಸ ತಂದಿದೆ. ಡಿಸ್ನಿ ಸ್ಟಾರ್ ದೇಶದಲ್ಲಿ ಮತ್ತಷ್ಟು ಕ್ರಿಕೆಟ್ ಪಂದ್ಯಗಳನ್ನು ಪ್ರಸಾರ ಮಾಡುವ ಅವಕಾಶ ಪಡೆದಿದೆ" ಎಂದು ಡಿಸ್ನಿ ಸ್ಟಾರ್‌ನ ಮ್ಯಾನೇಜರ್ ಮತ್ತು ಅಧ್ಯಕ್ಷ ಕೆ.ಮಾಧವನ್ ಹೇಳಿದ್ದಾರೆ.
ಇದನ್ನೂ ಓದಿ:Asia Cup 2022 SL vs AFG: ಲಂಕಾ ವಿರುದ್ಧ 10 ಓವರ್ಗಳಲ್ಲಿ ಗೆದ್ದು ಬೀಗಿದ ಅಫ್ಘಾನಿಸ್ತಾನ