ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಟಿ20 ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುವಾಗ ಫೀಲ್ಡಿಂಗ್ ಸೆಟ್ ಮಾಡುವುದು ಕಠಿಣ ಸವಾಲು. ಮೈದಾನದ ಎಲ್ಲಾ ಕಡೆ ಆಡುವ ಸಾಮರ್ಥ್ಯ ಅವರಿಗಿದೆ ಎಂದು ಹರಿಣಗಳ ಪಡೆಯ ಹಿರಿಯ ಆಟಗಾರ ಡೇವಿಡ್ ಮಿಲ್ಲರ್ ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಆಫ್ರಿಕಾದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಸೂರ್ಯ ತಮ್ಮ ಟಿ20 ವೃತ್ತಿ ಜೀವನದ ನಾಲ್ಕನೇ ಶತಕ ಗಳಿಸಿದರು. ಕೇವಲ 55 ಬಾಲ್ ಎದುರಿಸಿದ ಅವರು 106 ರನ್ ಕಲೆಹಾಕಿದರು. ಅವರ ಇನ್ನಿಂಗ್ಸ್ 8 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡಿತ್ತು. ಸ್ಕೈ ಸ್ಕೋರ್ ಸಹಾಯದಿಂದ ಭಾರತ 201ರನ್ಗಳ ಮೊತ್ತ ಕಲೆಹಾಕಿತು. ಟಿ20 ಮಾದರಿಯಲ್ಲಿ ಹೆಚ್ಚು ಶತಕಗಳನ್ನು ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ, ಗ್ಲೆನ್ ಮ್ಯಾಕ್ಸ್ವೆಲ್ ಅವರ ಪಟ್ಟಿ ಸೇರಿದ್ದಾರೆ.
"ಸೂರ್ಯ ವಿಶೇಷ ಆಟಗಾರ ಮತ್ತು ಇದು ನಿಜವಾಗಿಯೂ ಉತ್ತಮ ಆಟ ಆಗಿತ್ತು. ನಮ್ಮ ಆಟಗಾರರು ಅವರನ್ನು ನಿಯಂತ್ರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದರು. ಆದರೆ ಒಂದು ಹೆಜ್ಜೆ ಮುಂದೆ ಇದ್ದ ಸೂರ್ಯ ಎಲ್ಲರ ವಿರುದ್ಧ ಅಬ್ಬರಿಸಿದರು. ನಾವು ಭಾವಿಸಿದಂತೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಮೈದಾನದ ಎಲ್ಲಾ ಕಡೆ ರನ್ ಗಳಿಸಿದ್ದಾರೆ. ಅವರಿಗೆ ಫೀಲ್ಡಿಂಡ್ ಸೆಟ್ ಮಾಡುವುದು ಅತ್ಯಂತ ಕಷ್ಟದ ಕೆಲಸ" ಎಂದು ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಿಲ್ಲರ್ ಹೇಳಿದರು.