ಮುಂಬೈ:ಭಾರತ ಮತ್ತು ಪಾಕಿಸ್ತಾನದ ಪಂದ್ಯಗಳೆಂದರೆ ವಿಶ್ವ ಕ್ರಿಕೆಟ್ಗೆ ರಸದೌತಣವಾಗಿರುತ್ತದೆ. ಎರಡೂ ರಾಷ್ಟ್ರಗಳಲ್ಲದೆ, ಇಡೀ ವಿಶ್ವ ಕ್ರಿಕೆಟ್ ಈ ಪಂದ್ಯವನ್ನು ನೋಡುವುದಕ್ಕೆ ಎದುರು ನೋಡುತ್ತಿರುತ್ತದೆ. ಆ ಪಂದ್ಯದ ಫಲಿತಾಂಶವನ್ನು ಕೂಡ ಉಭಯ ದೇಶದ ಅಭಿಮಾನಿಗಳು ತುಂಬಾ ಭಾವನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ.
ಪ್ರಸ್ತುತ ಎರಡೂ ದೇಶಗಳ ನಡುವೆ ಸಂಬಂಧ ಹದಗೆಟ್ಟ ಕಾರಣ ಯಾವುದೇ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಡೆಯುತ್ತಿಲ್ಲ. ಕೇವಲ ಐಸಿಸಿ ಟೂರ್ನಮೆಂಟ್ನಲ್ಲಿ ಮಾತ್ರ ಎರಡೂ ತಂಡಗಳು ಮುಖಾಮುಖಿಯಾಗುತ್ತಿವೆ. ಆದರೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. 13 ಮುಖಾಮುಖಿಯಲ್ಲಿ ಭಾರತ 12-1ರಲ್ಲಿ ಮುನ್ನಡೆ ಪಡೆದುಕೊಂಡಿದೆ. 1992 ರ ವಿಶ್ವಚಾಂಪಿಯನ್ ಪಾಕಿಸ್ತಾನ 2022ರ ಟಿ20 ವಿಶ್ವಕಪ್ನಲ್ಲಿ ಭಾರತ ವಿರುದ್ಧ ಮೊದಲ ಜಯ ಸಾಧಿಸಿತು.
ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ವಿಶ್ವಕಪ್ ಪಂದ್ಯಗಳು ತನ್ನದೇ ಆದ ಚಾರ್ಮ್ ಹೊಂದಿವೆ. ಅದರಲ್ಲಿ 2011ರ ವಿಶ್ವಕಪ್ ಸೆಮಿಫೈನಲ್ ಕೂಡ ಒಂದು. ಉಪಾಂತ್ಯದ ಪಂದ್ಯದಲ್ಲಿ ಮೊಹಾಲಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದ ಬಗ್ಗೆ ಪ್ಯಾಡಿ ಅಪ್ಟನ್ ಅವರ 'ಲೆಸೆನ್ಸ್ ಫ್ರಮ್ ದಿ ವರ್ಲ್ಡ್ ಬೆಸ್ಟ್' ಪೋಡ್ಕಾಸ್ಟ್ನಲ್ಲಿ ಭಾರತದ ಲೆಜೆಂಡರಿ ಸ್ಪಿನ್ನರ್ ಕೆಲವು ಸ್ವಾರಸ್ಯಕರ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.
ಭಾರತ ಮೊದಲು ಬ್ಯಾಟಿಂಗ್ ಮಾಡಿ 261 ರನ್ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 142 ರನ್ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಧೋನಿ ಭಜ್ಜಿಗೆ ಬೌಲಿಂಗ್ ಮಾಡುವಂತೆ ಚೆಂಡು ನೀಡಿದರು. ಪಂದ್ಯ ನಿರ್ಣಾಯಕ ಸ್ಥಿತಿಯಲ್ಲಿದ್ದರಿಂದ ತಮಗೆ 2ನೇ ಸ್ಪೆಲ್ ಬೌಲಿಂಗ್ ಮಾಡುವುದಕ್ಕೆ ನಡುಕ ಉಂಟಾಗಿತ್ತು ಎಂದು ಹರ್ಭಜನ್ ಹೇಳಿಕೊಂಡಿದ್ದಾರೆ.