ಕೊಲಂಬೊ: ನಾಯಕ ಶಿಖರ್ ಧವನ್ ಮತ್ತು ಇಶಾನ್ ಕಿಶನ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಸಾಧಿಸಿದೆ.
ಕೊಲಂಬೋದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 262 ರನ್ಗಳಿಸಿತ್ತು. ಚಮಿಕಾ ಕರುಣರತ್ನೆ 43, ಶನಾಕ 39 ಮತ್ತು ಅಸಲಂಕಾ 38 ರನ್ಗಳಿಸಿದ್ದರು.
263 ರನ್ಗಳನ್ನು ಬೆನ್ನತ್ತಿದ ಭಾರತ ತಂಡಕ್ಕೆ ಪೃಥ್ವಿ ಶಾ ಮತ್ತು ಶಿಖರ್ ಧವನ್ ಆದ್ಭುತ ಆರಂಭ ಒದಗಿಸಿಕೊಟ್ಟರು. ಯುವ ಆಟಗಾರ ಶಾ ಕೇವಲ 24 ಎಸೆತಗಳಲ್ಲಿ 9 ಬೌಂಡರಿಗಳೊಡನೆ 43 ರನ್ಗಳಿಸಿ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 5.3 ಓವರ್ಗಳಲ್ಲಿ 58 ರನ್‌ಸೂರೆಗೈದಿತು.
ಶಾ ಔಟಾಗುತ್ತಿದ್ದಂತೆ ಕ್ರೀಸ್ಗೆ ಆಗಮಿಸಿದ ಇಶಾನ್ ಕಿಶನ್ ತಾವೆದುರಿಸದ ಮೊದಲ ಎಸೆತದಲ್ಲಿಯೇ ಸಿಕ್ಸರ್, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇವರು ಧವನ್ ಜೊತೆಗೂಡಿ 2ನೇ ವಿಕೆಟ್ ಜೊತೆಯಾಟದಲ್ಲಿ 85 ರನ್ಗಳ ಜೊತೆಯಾಟ ನಡೆಸಿದರು. ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದ 23ನೇ ಜನ್ಮದಿನವನ್ನು ಆಚರಿಸಿಕೊಂಡ ಕಿಶನ್ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 59 ರನ್ಗಳಿಸಿ ಸಂದಕನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನೀಶ್ ಪಾಂಡೆ 26 ರನ್ಗಳಿಸಿ ನಿರ್ಗಮಿಸಿದರು.
ಶಿಖರ್ ಧವನ್ 95 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಅಜೇಯ 86 ರನ್ಗಳಿಸಿದರು. ಅಲ್ಲದೆ ಸೂರ್ಯಕುಮಾರ್ ಯಾದವ್ ಜೊತೆಗೆ 4ನೇ ವಿಕೆಟ್ ಮುರಿಯದ 48 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಯಾದವ್ 20 ಎಸೆತಗಳಲ್ಲಿ ಅಜೇಯ 31 ರನ್ಗಳಿಸಿದರು.
ಇದಕ್ಕೂ ಮುನ್ನ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ದೀಪಕ್ ಚಹಾರ್ 37ಕ್ಕೆ 2, ಕುಲದೀಪ್ ಯಾದವ್ 48ಕ್ಕೆ 2, ಯುಜ್ವೇಂದ್ರ ಚಹಲ್ 52ಕ್ಕೆ 2, ಕೃನಾಲ್ ಪಾಂಡ್ಯ 26ಕ್ಕೆ1 ಮತ್ತು ಹಾರ್ದಿಕ್ ಪಾಂಡ್ಯ 33ಕ್ಕೆ 1 ವಿಕೆಟ್ ಪಡೆದು ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಡಿವಾಣ ಹಾಕಿದರು.