ಪುದುಚೇರಿ: ರೋಹನ್ ಕುನ್ನುಮ್ಮಲ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಆರಂಭಿಕ ಜೊತೆಯಾಟ ಮತ್ತು ವಾಷಿಂಗ್ಟನ್ ಸುಂದರ್ ಅವರ 3 ವಿಕೆಟ್ಗಳ ಸಹಾಯದಿಂದ ದಕ್ಷಿಣ ವಲಯವು 2023ರ ದೇವಧರ್ ಟ್ರೋಫಿ ಮುಡಿಗೇರಿಸಿಕೊಂಡಿತು. ಪೂರ್ವ ವಲಯ 45 ರನ್‌ಗಳ ಸೋಲನುಭವಿಸಿತು. ಈ ಮೂಲಕ 9ನೇ ಬಾರಿಗೆ ದಕ್ಷಿಣ ವಲಯ ಪ್ರಶಸ್ತಿ ಗೆದ್ದುಕೊಂಡಿತು.
ಮ್ಯಾಚ್ ಹೇಗಿತ್ತು?: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ 329 ರನ್‌ಗಳ ಬೃಹತ್ ಗುರಿ ನೀಡಿತು. ಇದನ್ನು ಬೆನ್ನತ್ತಲು ಶುರು ಮಾಡಿದ ಪೂರ್ವ ವಲಯ ಉತ್ತಮ ಆರಂಭ ಪಡೆಯಲಿಲ್ಲ. ವಾಸುಕಿ ಕೌಶಿಕ್ ಮತ್ತು ವಿದ್ವತ್ ಕಾವೇರಪ್ಪ ಅವರ ಮಧ್ಯಮ ವೇಗದ ಬೌಲಿಂಗ್ಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಅಭಿಮನ್ಯು ಈಶ್ವರನ್ (1), ವಿರಾಟ್ ಸಿಂಗ್ (6) ಮತ್ತು ಉತ್ಕರ್ಷ್ ಸಿಂಗ್ (4) ವಿಕೆಟ್ ಒಪ್ಪಿಸಿದರು. ಹೀಗೆ, ಪೂರ್ವ ವಲಯ 17 ರನ್ 3 ವಿಕೆಟ್ ಕಳೆದುಕೊಂಡಿತ್ತು.
ಆರಂಭಿಕರ ವೈಫಲ್ಯದ ನಂತರ ನಾಯಕ ಸೌರಭ್ ತಿವಾರಿ ಮತ್ತು ಸುದೀಪ್ ಕುಮಾರ್ ಘರಾಮಿ ಪೂರ್ವ ವಲಯಕ್ಕೆ ಆಸರೆಯ ಇನ್ನಿಂಗ್ಸ್ ಆಡಿದರು. ಈ ಜೋಡಿ 50 ರನ್ ಜೊತೆಯಾಟ ಮಾಡುತ್ತಿದ್ದಂತೆ ವಾಷಿಂಗ್ಟನ್ ಸುಂದರ್ 28 ರನ್ ಗಳಿಸಿ ಆಡುತ್ತಿದ್ದ ನಾಯಕ ತಿವಾರಿ ಮತ್ತು 41 ಗಳಿಸಿದ್ದ ಘರಾಮಿ ಅವರ ವಿಕೆಟ್ ಪಡೆದರು. 6ನೇ ವಿಕೆಟ್ಗೆ ಕುಮಾರ್ ಕುಶಾಗ್ರ ಮತ್ತು ರಿಯಾನ್ ಪರಾಗ್ ಜೋಡಿ ಒಂದಾಗಿ ಪೂರ್ವ ವಲಯಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಅಬ್ಬರಿಸಿ ಆಡಿದ ರಿಯಾನ್ ಪರಾಗ್ 5 ರನ್ನಿಂದ ದೇವಧರ್ ಟೋಫಿಯ ಮೂರನೇ ಶತಕದಿಂದ ವಂಚಿತರಾದರು. 65 ಬಾಲ್ನಲ್ಲಿ 5 ಸಿಕ್ಸ್ ಮತ್ತು 8 ಬೌಂಡರಿಯ ಸಹಾಯದಿಂದ ಅವರು 95 ರನ್ ಕಲೆಹಾಕಿದರು. ಶತಕದ ಸನಿಹದಲ್ಲಿದ್ದ ರಿಯಾನ್ ಅವರನ್ನೂ ವಾಷಿಂಗ್ಟನ್ ಸುಂದರ್ ಪೆವಿಲಿಯನ್ಗೆ ಕಳುಹಿಸಿದರು.
ಈ ಬೆನ್ನಲ್ಲೇ ಅರ್ಧಶತಕ ಗಳಿಸಿ ಆಡುತ್ತಿದ್ದ ಕುಶಾಗ್ರ ಸಹ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಪೂರ್ವ ವಲಯಕ್ಕೆ ಗೆಲುವು ಕಠಿಣವಾಗತೊಡಗಿತು. ಕೊನೆಯ ಮೂರು ಬಾಲಂಗೋಚಿ ವಿಕೆಟ್‌ಗಳನ್ನು ದಕ್ಷಿಣ ವಲಯ ಸುಲಭವಾಗಿ ಕಬಳಿಸಿತು. ಇದರಿಂದಾಗಿ ಮಯಾಂಕ್ ತಂಡ 46.1 ಓವರ್ನಲ್ಲೇ ಪಂದ್ಯವನ್ನು 45 ರನ್‌ಗಳಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ದಕ್ಷಿಣ ವಲಯದ ಆರಂಭಿಕರಾದ ರೋಹನ್ ಕುನ್ನುಮ್ಮಲ್ ಮತ್ತು ನಾಯಕ ಮಯಾಂಕ್ 181 ರನ್‌ಗಳ ದೊಡ್ಡ ಜೊತೆಯಾಟ ಮಾಡಿದರು. ಆರಂಭಿಕ ರೋಹನ್ ಕುನ್ನುಮ್ಮಲ್ 107 ರನ್ ಗಸಿದರೆ, ಅಗರ್ವಾಲ್ 63 ರನ್ ಗಳಿಸಿದರು. ಮೂರನೇ ವಿಕೆಟ್ನಲ್ಲಿ ವಿಫಲತೆ ಕಂಡರೂ, ಎನ್. ಜಗದೀಶನ್ (54) ಅರ್ಧಶತಕ ಗಳಿಸಿದರೆ, ರೋಹಿತ್ ರಾಯುಡು ಮತ್ತು ಸಾಯ್ ಕಿಶೋರ್ 20 ಪ್ಲಸ್ ರನ್ ಕಲೆಹಾಕಿ ತಂಡಕ್ಕೆ ಸಹಾಯ ಮಾಡಿದರು. ದಕ್ಷಿಣ ವಲಯ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿತ್ತು.
ದೇವಧರ್ ಟ್ರೋಫಿಯಲ್ಲಿ ಮಿಂಚಿದ ಪ್ರತಿಭೆಗಳು:ನಾಲ್ಕು ವರ್ಷದ ನಂತರ ನಡೆದ ಏಕದಿನ ಮಾದರಿಯ ದೇಶೀಯ ಟೂರ್ನಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.