ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ಬಾಲ ಭವನ್ ಅಕಾಡೆಮಿಯ 12 ವರ್ಷದ ಬಾಲಕ ಮೋಹಕ್ ಕುಮಾರ್ 13 ವರ್ಷದೊಳಗಿನ ಡ್ರೀಮ್ ಕಪ್ ಚೇಸರ್ಸ್ ಟೂರ್ನಮೆಂಟ್ನಲ್ಲಿ ವೇಗದ ತ್ರಿಶತಕ ಸಿಡಿಸಿ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದರು.
ಮೋಹಕ್ ಎಂಡುರೆನ್ಸ್ ಕ್ರಿಕೆಟ್ ಅಕಾಡೆಮಿ ವಿರುದ್ಧ ನಡೆದ ಪಂದ್ಯದಲ್ಲಿ 125 ಎಸೆತಗಳಲ್ಲಿ 20 ಸಿಕ್ಸರ್ಸ್ ಮತ್ತು 28 ಫೋರ್ಗಳ ಸಹಿತ ಒಟ್ಟು 331 ರನ್ ಸಿಡಿಸಿದ್ದಾರೆ.
ಎಡಗೈ ಬ್ಯಾಟರ್ ಆಗಿರುವ ಮೋಹಕ್, ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ, ಕ್ರಿಸ್ ಗೇಲ್ ಮತ್ತು ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಅಪ್ಪಟ ಅಭಿಮಾನಿ. ಲಾರಾ ಅವರಂತೆ ಸ್ಕ್ವೇರ್ ಡ್ರೈವ್ ಮತ್ತು ಪಂತ್ರಂತೆ ಸಿಕ್ಸರ್ ಬಾರಿಸುವುದನ್ನು ಚಿಕ್ಕವಯಸ್ಸಿನಲ್ಲೇ ಕರಗತ ಮಾಡಿಕೊಂಡಿದ್ದಾರೆ.
ಐಎಎನ್‌ಎಸ್ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, "ನಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದಕ್ಕೆ ಇಷ್ಟಪಡುತ್ತೇನೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ವಿಕೆಟ್ ಕಾಪಾಡಿಕೊಳ್ಳಬೇಕಾದಾಗ ಸ್ಟ್ರೈಕ್ ರೊಟೇಶನ್ ಮಾಡುವುದಕ್ಕೆ ಬಯಸುತ್ತೇನೆ" ಎಂದು ತನ್ನ ಆಟದ ವೈಖರಿಯನ್ನು ವಿವರಿಸಿದರು.
ಮೋಹಕ್ ಅವರ ಈ ಆಕ್ರಮಣಕಾರಿ ಆಟ ನೋಡಿದ ತಕ್ಷಣ ದೆಹಲಿ ಅಂಡರ್ 14 ತಂಡಕ್ಕೆ ಆಯ್ಕೆ ಮಾಡಲು ಮೊದಲ ಆದ್ಯತೆಯ ಆಟಗಾರನಾಗಿ ಗುರುತಿಸಲಾಗಿದೆ. ಡಿಸೆಂಬರ್ನಲ್ಲಿ ನಡೆಯುವ ಟ್ರಯಲ್ಸ್ಗೆ ಈಗಾಗಲೇ ಮೋಹಕ್ ತಯಾರಿ ನಡೆಸುತ್ತಿದ್ದಾರೆ.
ಮೋಹಕ್ ಬ್ಯಾಟ್ ಹಿಡಿದುಕೊಳ್ಳಲು ಬಾರದ ದಿನಗಳಿಂದಲೂ ಕೋಚ್ ಆಗಿರುವ ನವನೀತ್ ಕುಮಾರ್ ಮಿಶ್ರಾ ತಮ್ಮ ಶಿಷ್ಯನ ಸಾಧನೆಯನ್ನು ಪ್ರಶಂಸಿಸಿದರು. ಮೋಹಕ್ 40-50 ರನ್ಗಳಿಸಿದರೆ ತೃಪ್ತನಾಗುವುದಿಲ್ಲ ಎಂದು ಅವರು ಹೇಳುತ್ತಾರೆ.
"ಮೋಹಕ್ ಪಂದ್ಯದ ಅಂತ್ಯದವರೆಗೂ ಆಡುವುದಕ್ಕೆ ಬಯಸುತ್ತಾನೆ. ಅವನಂತಹ ಆಕ್ರಮಣಕಾರಿ ಬ್ಯಾಟರ್ ಇನ್ನಿಂಗ್ಸ್ ಅಂತ್ಯದವರೆಗೆ ಬ್ಯಾಟ್ ಮಾಡಿದರೆ ತಂಡ ಖಂಡಿತಾ ಬೃಹತ್ ಮೊತ್ತ ದಾಖಲಿಸುತ್ತದೆ. ಈತ ಇದೇ ರೀತಿಯಲ್ಲಿ ಆಡುವುದನ್ನು ಮುಂದುವರಿಸಿದರೆ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಗೌರವ ಸಂಪಾದಿಸಲಿದ್ದಾನೆ" ಎಂದು ಮಿಶ್ರಾ ಭವಿಷ್ಯ ನುಡಿದರು.
ಈ ಬಾಲಕನ ತಂದೆ ಮನೀಶ್ ಕೂಡ ತಮ್ಮ ಮಗನ ಸಾಧನೆ ನೋಡಿ ಸಂತೋಷಪಟ್ಟಿದ್ದು, ಮಗನನ್ನು ದೊಡ್ಡ ಕ್ರಿಕೆಟರ್ ಆಗಿ ನೋಡುವುದಕ್ಕೆ ಬಯಸುತ್ತೇನೆ. ಅದಕ್ಕೆ ಅಗತ್ಯವಾದ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
"ಮೋಹಕ್ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರಂತೆಯೇ ಬ್ಯಾಟಿಂಗ್ ಮಾಡುತ್ತಾರೆ. ಪಂತ್ರಂತೆಯೇ ಎಡಗೈ ಬ್ಯಾಟರ್ ಮತ್ತು ಭಯವಿಲ್ಲದೇ ಆಡಬಲ್ಲ. ಅವನು ತುಂಬಾ ತಾಳ್ಮೆ ಹೊಂದಿದ್ದಾನೆ, ಆದರೆ ಬ್ಯಾಟಿಂಗ್ ಮಾತ್ರ ತುಂಬಾ ಆಕ್ರಮಣಕಾರಿಯಾಗಿರುತ್ತದೆ. ಮೋಹಕ್ಗೆ ಉತ್ತಮ ಬೆಂಬಲ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಅಕಾಡೆಮಿ ಸಿಇಒಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ" ಎಂದು ಮನೀಶ್ ಕುಮಾರ್ ಹೇಳಿದರು.
ಈ ಪಂದ್ಯದಲ್ಲಿ ಮೋಹಕ್ ಅವರ ಬಾಲ ಭವನ್ ಅಕಾಡೆಮಿ 40 ಓವರ್ಗಳಲ್ಲಿ 576 ರನ್ ಸಿಡಿಸಿದರೆ, ಇದಕ್ಕುತ್ತರವಾಗಿ ಎಂಡುರೆನ್ಸ್ ಕ್ರಿಕೆಟ್ ಅಕಾಡೆಮಿ 17.1 ಓವರ್ಗಳಲ್ಲಿ 153 ರನ್ಗಳಿಗೆ ಆಲೌಟ್ ಆಯಿತು.
ಇದನ್ನೂ ಓದಿ:IPL Retention : ಮ್ಯಾಕ್ಸ್ವೆಲ್, ಕೊಹ್ಲಿ ನಂತರ ಸಿರಾಜ್ರನ್ನು ಉಳಿಸಿಕೊಳ್ಳಲು RCB ನಿರ್ಧಾರ