ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ಮುಗಿದ ಅಂತಾರಾಷ್ಟ್ರೀಯ ಟಿ20 ವನಿತೆಯರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ಕೌರ್ ಮತ್ತು ಮೆಗ್ ಲ್ಯಾನಿಂಗ್ ತಮ್ಮ ತಂಡದೊಂದಿಗೆ ಮುಖಾಮುಖಿಯಾಗಿದ್ದರು. ಇಂದು ಡಬ್ಲ್ಯೂಪಿಎಲ್ನ ಫೈನಲ್ನಲ್ಲೂ ಅದೇ ನಾಯಕಿಯರು ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಒಂದು ಬದಲಾವಣೆಯಾಗಿದ್ದು ಪೂನಂ ಯಾದವ್ ಬದಲಿಯಾಗಿ ಮಿನ್ನು ಮಣಿ ಆಡಲಿದ್ದಾರೆ.
ತಂಡಗಳು ಇಂತಿವೆ.. ಡೆಲ್ಲಿ ಕ್ಯಾಪಿಟಲ್ಸ್:ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ಆಲಿಸ್ ಕ್ಯಾಪ್ಸೆ, ಜೆಸ್ ಜೊನಾಸ್ಸೆನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ, ಮಿನ್ನು ಮಣಿ
ಮುಂಬೈ ಇಂಡಿಯನ್ಸ್:ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಮೆಲಿ ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್‌ಜೋತ್ ಕೌರ್, ಹುಮೈರಾ ಕಾಜಿ, ಜಿಂಟಿಮಣಿ ಕಲಿತಾ, ಸೈಕಾ ಇಶಾಕ್
ಲೀಗ್ ಮುಖಾಮುಖಿ:ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಮತ್ತು ದೆಹಲಿ ನಡುವೆ ಎರಡು ಪಂದ್ಯಗಳು ನಡೆದಿವೆ. ಮಾರ್ಚ್ 9 ರಂದು ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ದೆಹಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಮಾರ್ಚ್ 20 ರಂದು ಎರಡನೇ ಬಾರಿಗೆ, ಎರಡೂ ತಂಡಗಳು ಮತ್ತೆ ಮುಖಾಮುಖಿಯಾದವು, ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡು ಗೆಲುವು ಸಾಧಿಸಿತು. ಮೆಗ್ ತಂಡ ಹರ್ಮನ್‌ಪ್ರೀತ್ ಕೌರ್ ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಸೋಲಿಸಿತು.
ಇಂದಿನ ಪಂದ್ಯದಲ್ಲಿ ಇವರ ಮೇಲೆ ಹೆಚ್ಚಿನ ನಿರೀಕ್ಷೆ:ಡೆಲ್ಲಿ ಕ್ಯಾಪಿಟಲ್ಸ್ನ ಶಿಖಾ ಪಾಂಡೆ 10 ಮತ್ತು ಎಂಐನ ಸೈಕಾ ಇಶಾಕ್ 15 ವಿಕೆಟ್ ಪಡೆದ ಬೌಲರ್ ಗಳಾಗಿದ್ದಾರೆ. ಅತ್ಯುತ್ತಮ ಬೌಲಿಂಗ್ನ ಸರಾಸರಿಯಲ್ಲಿ ಡಿಸಿಯ ತಾರಾ ನಾರ್ರಿಸ್ 12.71 ಹೊಂದಿದ್ದರೆ, ಮುಂಬೈನ ಪೂಜಾ ವಸ್ತ್ರಕರ್ 11.50 ಪಡೆದಿದ್ದಾರೆ. ಅತ್ಯುತ್ತಮ ಬೌಲಿಂಗ್ ಎಕಾನಮಿಯಲ್ಲಿ ಕ್ಯಾಪಿಟಲ್ಸ್ನ ಮರಿಜ್ಜೇನ್ ಕಪ್ 5.75 ಮತ್ತು ಇಂಡಿಯನ್ಸ್ನ ಪೂಜಾ ವಸ್ತ್ರಕರ್ 5.75 ಹೊಂದಿದ್ದಾರೆ.
ಮತ್ತೊಂದು ಕಪ್ ಗೆಲ್ಲುತ್ತಾರ ಮೆಗ್:ಮೆಗ್ ಲ್ಯಾನಿಂಗ್ ವಿಶ್ವಕಪ್ ಗೆದ್ದು ಬಂದಿದ್ದಾರೆ. ಸೆಮಿಫೈನಲ್ನಲ್ಲಿ ಭಾರತ ಆಸಿಸ್ ವಿರುದ್ಧ ಸೋಲನುಭವಿಸಿತ್ತು. ಅಂದರೆ ಭಾರತದ ನಾಯಕತ್ವ ಹರ್ಮನ್‌ಪ್ರೀತ್ ಕೌರ್ ಪಡೆ ಬಳಿ ಇದ್ದರೆ ಆಸಿಸ್ ನಾಯಕತ್ವ ಮೆಗ್ ಲ್ಯಾನಿಂಗ್ ಬಳಿ ಇತ್ತು ಹೀಗಾಗಿ ಮತ್ತೆ ವಿಶ್ವ ಕಪ್ ತಂಡದ ನಾಯಕಿಯರ ಮುಖಾಮುಖಿ ಜರುಗುತ್ತಿದೆ. ಇಲ್ಲಿ ಮತ್ತೆ ವಿಶ್ವಕಪ್ ವಿಜೇತೆ ಮೆಗ್ ಲ್ಯಾನಿಂಗ್ ಪ್ರಶಸ್ತಿ ಗೆಲ್ಲಲಿದ್ದಾರಾ ಎಂಬುದು ಫಲಿತಾಂಶದಲ್ಲಿ ತಿಳಿಯಲಿದೆ.
ಇದನ್ನೂ ಓದಿ:ಈ ಬಾರಿಯ ಐಪಿಎಲ್ನಲ್ಲಿ ಹೆಚ್ಚಿನ ನಿರೀಕ್ಷೆ ಇರುವ ಆಟಗಾರರಿವರು..