ಮುಂಬೈ :ಆಸ್ಟ್ರೇಲಿಯಾ ಮಾಜಿ ಆಲ್ರೌಂಡರ್ ಶೇನ್ ವಾಟ್ಸನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮುಂಬರುವ ಐಪಿಎಲ್ ಆವೃತ್ತಿಗಾಗಿ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿರುವುದಾಗಿ ಮಂಗಳವಾರ ತಿಳಿಸಿದೆ.
2008 ಮತ್ತು 2018ರ ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿರುವ ಶೇನ್ ವಾಟ್ಸನ್ ಇದೀಗ ರಿಕಿ ಪಾಂಟಿಂಗ್(ಹೆಡ್ ಕೋಚ್), ಪ್ರವೀಣ್ ಆಮ್ರೆ(ಸಹಾಯಕ ಕೋಚ್), ಅಜಿತ್ ಅಗರ್ಕರ್ (ಸಹಾಯಕ ಕೋಚ್) ಮತ್ತು ಜೇಮ್ಸ್ ಹೋಪ್(ಬೌಲಿಂಗ್ ಕೋಚ್) ಜೊತೆಗೆ ಸೇರಿಕೊಂಡು ತಂಡದ ಚೊಚ್ಚಲ ಟೈಟಲ್ ಆಸೆಯನ್ನು ಪೂರೈಸಲು ಶ್ರಮಿಸಲಿದ್ದಾರೆ.
ಐಪಿಎಲ್ ವಿಶ್ವದ ಅತ್ಯುತ್ತಮ ಟಿ20 ಟೂರ್ನಮೆಂಟ್ ಅಗಿದೆ. ನನಗೆ ಆಟಗಾರನಾಗಿ ಲೀಗ್ನಲ್ಲಿ ಸುಂದರವಾದ ನೆನಪುಗಳಿವೆ. 2008ರಲ್ಲಿ ಗ್ರೇಟ್ ಶೇನ್ ವಾರ್ನ್ ನೇತೃತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಆಡಿ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿಯನ್ನು ಗೆದ್ದಿರುವುದು. ನಂತರ ಆರ್ಸಿಬಿ, ಆ ನಂತರ ಸಿಎಸ್ಕೆ ಜೊತೆ ಆಟಗಾರನಾಗಿ ನಂಬಲಾಸಾಧ್ಯವಾದ ನೆನಪುಗಳಿವೆ.
ಇದೀಗ ಕೋಚಿಂಗ್ ಅವಕಾಶ ನನಗೆ ಸಿಕ್ಕಿದೆ. ಅದು ರಿಕಿ ಪಾಂಟಿಂಗ್ ನೇತೃತ್ವದಲ್ಲಿ ಕೆಲಸ ಮಾಡುವ ಅವಕಾಶ. ಅವರೊಬ್ಬ ಅದ್ಭುತ ನಾಯಕ, ವಿಶ್ವದ ಅತ್ಯಂತ ಶ್ರೇಷ್ಠ ಕೋಚ್ಗಳಲ್ಲಿ ಒಬ್ಬರಾಗಿರುವ ಅವರ ಜೊತೆಗೆ ಕೆಲಸ ಮಾಡುವುದರಿಂದ ನಾನು ಸಾಕಷ್ಟು ಕಲಿಯಲಿದ್ದೇನೆ ಮತ್ತು ಅದಕ್ಕಾಗಿ ಉತ್ಸುಕನಾಗಿ ಕಾಯುತ್ತಿದ್ದೇನೆ ಎಂದು ವಾಟ್ಸನ್ ಹೇಳಿದ್ದಾರೆ.
ತಂಡದ ಬಗ್ಗೆ ಮಾತನಾಡಿ, ಡೆಲ್ಲಿ ಕ್ಯಾಪಿಟಲ್ಸ್ ಶ್ರೇಷ್ಠ ತಂಡವನ್ನು ಹೊಂದಿದೆ. ಇದು ಅವರು ಮೊದಲ ಪ್ರಶಸ್ತಿ ಗೆಲ್ಲುವ ಸಮಯ. ನಾನು ಅಲ್ಲಿಗೆ ತೆರಳಿ, ಹುಡುಗರೊಂದಿಗೆ ಕೆಲಸ ಮಾಡಲು ಮತ್ತು ಅವರೊಂದಿಗೆ ಸೇರಿ ಅತ್ಯುತ್ತಮವಾದ ಪ್ರದರ್ಶನ ಹೊರತಂದು ಮೊದಲ ಪ್ರಶಸ್ತಿಯನ್ನು ಎತ್ತಿಹಿಡಿಯಲು ನನ್ನಿಂದ ಸಾಧ್ಯವಾದದನ್ನೆಲ್ಲ ಮಾಡುವುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ ಎಂದು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ತಿಳಿಸಿದ್ದಾರೆ.
ವಾಟ್ಸನ್ ಆಸ್ಟ್ರೇಲಿಯಾ ಪರ 59 ಟೆಸ್ಟ್, 190 ಏಕದಿನ ಪಂದ್ಯ, 58 ಟಿ20ಗಳಲ್ಲಿ ಪ್ರತಿನಿಧಿಸಿ10,000 ಕ್ಕೂ ಹೆಚ್ಚು ರನ್ ಮತ್ತು 280ಕ್ಕೂ ಹೆಚ್ಚಿನ ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಐಪಿಎಲ್ನಲ್ಲಿ 145 ಪಂದ್ಯಗಳನ್ನಾಡಿದ್ದು 3874 ರನ್ ಮತ್ತು 92 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಸ್ಟಾರ್ ಬ್ಯಾಟರ್ ಇಲ್ಲದೆ ಮೊದಲ ಪಂದ್ಯವನ್ನಾಡಬೇಕಿದೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್