ಕರ್ನಾಟಕ

karnataka

ETV Bharat / sports

ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು - ಮಹೇಂದ್ರ ಸಿಂಗ್ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಅವರ ಇಬ್ಬರು ಮಾಜಿ ವ್ಯಾಪಾರ ಪಾಲುದಾರರು ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

Defamation suit filed  M S Dhoni  former business partners  ಮಹೇಂದ್ರ ಸಿಂಗ್ ಧೋನಿ  ಮಾನನಷ್ಟ ಮೊಕದ್ದಮೆ
ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

By PTI

Published : Jan 17, 2024, 8:42 AM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿರುದ್ಧ ದೆಹಲಿ ಹೈಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಜನವರಿ 18ರಂದು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ನೇತೃತ್ವದ ಪೀಠ ನಡೆಸಲಿದೆ. ಇಬ್ಬರು ಮಾಜಿ ವ್ಯಾಪಾರ ಪಾಲುದಾರರು ಧೋನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಿಹಾರದ ಮಾಜಿ ರಣಜಿ ಕ್ರಿಕೆಟಿಗ ಮಿಹಿರ್ ದಿವಾಕರ್ ಮತ್ತು ಅವರ ಪತ್ನಿ ಸೌಮ್ಯ ದಾಸ್, ಧೋನಿ ಅವರ ಬಾಲ್ಯದ ಸ್ನೇಹಿತ ಮತ್ತು ಕ್ರಿಕೆಟ್ ಅಕಾಡೆಮಿ ಯೋಜನೆಯ ಪಾಲುದಾರರಾಗಿದ್ದರು. 2017ರ ಒಪ್ಪಂದದ ಉಲ್ಲಂಘನೆಗೆ ಸಂಬಂಧಿಸಿದಂತೆ ಧೋನಿ ಮತ್ತು ಅವರ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಜನರು ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಆರೋಪಗಳು ವರದಿಯಾಗುತ್ತಿರುವುದರಿಂದ ತಮ್ಮ ಇಮೇಜ್ ಮತ್ತು ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಮಿಹಿರ್ ದಿವಾಕರ್ ತಿಳಿಸಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಮಾನಹಾನಿಕರ ಮತ್ತು ದುರುದ್ದೇಶಪೂರಿತ ಹೇಳಿಕೆಗಳನ್ನು ನೀಡುವುದು, ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ತಡೆಯುವಂತೆ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸುವ ಒಪ್ಪಂದದ ವಿಷಯದಲ್ಲಿ ಸುಮಾರು 16 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಧೋನಿ ತಮ್ಮ ವ್ಯವಹಾರದ ಇಬ್ಬರು ಮಾಜಿ ಪಾಲುದಾರರ ವಿರುದ್ಧ ಜನವರಿ 5ರಂದು ಕ್ರಿಮಿನಲ್ ಮೊಕದ್ದಮೆ ಕೇಸು ದಾಖಲಿಸಿದ್ದರು. ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಆರ್ಕಾ ಸ್ಪೋರ್ಟ್ಸ್‌ನ ಇಬ್ಬರು ನಿರ್ದೇಶಕರ ವಿರುದ್ಧ ಕೆಳ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದೆ ಎಂದು ಧೋನಿ ಪರ ವಕೀಲರು ತಿಳಿಸಿದ್ದರು.

ಧೋನಿ ಪರ ವಕೀಲರಾದ, ಪಾಟ್ನಾದ ವಿಧಿ ಅಸೋಸಿಯೇಟ್ಸ್‌ ಎಂಬ ಕಾನೂನು ಸಂಸ್ಥೆಯ ದಯಾನಂದ್ ಸಿಂಗ್ ಮಾತನಾಡಿ, ಧೋನಿ​ ಪರವಾಗಿ ರಾಂಚಿಯ ಸಕ್ಷಮ ನ್ಯಾಯಾಲಯದಲ್ಲಿ ಅರ್ಕಾ ಸ್ಪೋರ್ಟ್ಸ್ ನಿರ್ದೇಶಕರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ಬಿಸ್ವಾಸ್ ವಿರುದ್ಧ ಐಪಿಸಿ ಸೆಕ್ಷನ್ 406 ಮತ್ತು 420ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿಗಳನ್ನು ಸ್ಥಾಪಿಸಲು ಆರೋಪಿಗಳು 2017ರಲ್ಲಿ ಧೋನಿ ಅವರನ್ನು ಸಂಪರ್ಕಿಸಿದ್ದರು. ಆರಂಭದಲ್ಲಿ ಸಂಪೂರ್ಣ ಫ್ರಾಂಚೈಸಿ ಶುಲ್ಕವನ್ನು ಸ್ವೀಕರಿಸಿ, ಲಾಭವನ್ನು ಧೋನಿ ಮತ್ತು ಪಾಲುದಾರರ ನಡುವೆ 70:30 ಆಧಾರದ ಮೇಲೆ ಹಂಚಿಕೊಳ್ಳುವ ಬಗ್ಗೆ ಒಪ್ಪಂದ ಏರ್ಪಟ್ಟಿತ್ತು. ಆದರೂ ಪಾಲುದಾರರು ಧೋನಿ ಅವರಿಗೆ ತಿಳಿಸದೆ ಅಕಾಡೆಮಿಗಳನ್ನು ಸ್ಥಾಪಿಸಲು ಪ್ರಾರಂಭಿಸಿದ್ದರು. ಇದಕ್ಕೆ ಯಾವುದೇ ಶುಲ್ಕ ಪಾವತಿಸಲಿಲ್ಲ. ಅಲ್ಲದೇ, ಅವರಿಗೆ ಒದಗಿಸಲಾಗಿದ್ದ ಅಧಿಕಾರ ಪತ್ರವನ್ನು 2021ರ ಆಗಸ್ಟ್ 15ರಂದು ಹಿಂಪಡೆಯಲಾಗಿತ್ತು ಎಂದು ಮಾಹಿತಿ ನೀಡಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದಲ್ಲಿ ವರದಿ ಪ್ರಕಟಿಸಲಾಗಿತ್ತು. ಹೀಗಾಗಿ ಫಿರ್ಯಾದಿದಾರರು ಧೋನಿ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:₹16 ಕೋಟಿ ವಂಚನೆ ಆರೋಪ: ಮಾಜಿ ಉದ್ಯಮ ಪಾಲುದಾರರ ವಿರುದ್ಧ ಧೋನಿ ಕೇಸ್

ABOUT THE AUTHOR

...view details