ದುಬೈ:ಭಾರತದ ವನಿತೆಯರು ಆಡುತ್ತಿರುವ ತ್ರಿಕೋನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವದೀಪ್ತಿ ಶರ್ಮಾ ಐಸಿಸಿ ಶ್ರೇಯಾಂಕದಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವನಿತೆಯರ ನಡುವೆ ತ್ರಿಕೋನ ಸರಣಿ ಹರಿಣಗಳ ನಾಡಲ್ಲಿ ನಡೆಯುತ್ತಿದೆ. ಈವರೆಗೆ ಮೂರು ಪಂದ್ಯಗಳಲ್ಲಿ ದೀಪ್ತಿ ಶರ್ಮಾ 9 ವಿಕೆಟ್ ಪಡೆದಿದ್ದಾರೆ.
ಐಸಿಸಿ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನಕ್ಕೇರಿರುವ ದೀಪ್ತಿ ಮೊದಲ ಶ್ರೇಯಾಂಕದ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ ಅವರಿಂದ ಕೇವಲ 26 ರೇಟಿಂಗ್ ಪಾಯಿಂಟ್‌ಯಿಂದ ಹಿಂದೆ ಇದ್ದಾರೆ. 25 ವರ್ಷ ವಯಸ್ಸಿನ ಆಫ್-ಸ್ಪಿನ್ನರ್ ದೀಪ್ತಿ, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಅಂತಾರಾಷ್ಟ್ರೀಯ ತ್ರಿಕೋನ ಸರಣಿಯಲ್ಲಿ ಒಂಬತ್ತು ವಿಕೆಟ್‌ಗಳೊಂದಿಗೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ದೀಪ್ತಿ ಅವರು 737 ಅಂಕಗಳನ್ನು ಹೊಂದಿದ್ದಾರೆ.
ತ್ರಿಕೋನ ಸರಣಿಯಲ್ಲಿ ನಾಲ್ಕು ವಿಕೆಟ್ ಕಬಳಿಸಿರುವ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ನೊನ್ಕುಲುಲೆಕೊ ಮಲಬಾ ಕೂಡ ಒಂದು ಸ್ಥಾನ ಮೇಲಕ್ಕೇರಿದ್ದು, 732 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಇಬ್ಬರೂ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿದರೆ ಫೆಬ್ರವರಿ 10 ರಿಂದ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗುವ ಮಹಿಳಾ ಟಿ 20 ವಿಶ್ವಕಪ್ ಮೊದಲು ಎಕ್ಲೆಸ್ಟೋನ್ ಅನ್ನು ಹಿಂದಿಕ್ಕುವ ಅವಕಾಶವನ್ನು ಹೊಂದಿದ್ದಾರೆ.
ಈಸ್ಟ್ ಲಂಡನ್‌ನಲ್ಲಿ ಗುರುವಾರ ನಡೆಯಲಿರುವ ಟಿ20 ಅಂತಾರಾಷ್ಟ್ರೀಯ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಣಸಲಿವೆ. ಭಾರತದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಕೂಡ ನಾಲ್ಕು ಸ್ಥಾನ ಮೇಲೇರಿ 14ನೇ ಸ್ಥಾನಕ್ಕೆ ತಲುಪಿದ್ದಾರೆ. ಈ ವಾರ ಅಗ್ರ 10 ಬೌಲರ್‌ಗಳ ಶ್ರೇಯಾಂಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆಸ್ಟ್ರೇಲಿಯಾದ ವೇಗದ ಬೌಲರ್ ಮೇಗನ್ ಶುಟ್ ಆರು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ ಮತ್ತು ಇಂಗ್ಲೆಂಡ್‌ನ ವೇಗದ ಬೌಲರ್ ಕ್ಯಾಥರೀನ್ ಸ್ಕಿವರ್ ಬ್ರಂಟ್ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು ಆರನೇ ಸ್ಥಾನಕ್ಕೆ ತಲುಪಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕ:ಸ್ಮೃತಿ ಮಂದಾನ ತ್ರಿಕೋನ ಸರಣಿಯಲ್ಲಿ ಉತ್ತಮವಾಗಿ ಆಡುತ್ತಿದ್ದು 3 ನೇ ಸ್ಥಾನವನ್ನು ಹಾಗೇ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಬಲಗೈ ಬ್ಯಾಟ್ಸ್‌ಮನ್ ತಹ್ಲಿಯಾ ಮೆಕ್‌ಗ್ರಾತ್ ಟಿ20 ಅಂತರಾಷ್ಟ್ರೀಯ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ತನ್ನ ಪ್ರಬಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಲಾರಾ ವೂಲ್‌ವರ್ತ್ ನಾಲ್ಕು ಸ್ಥಾನ ಮೇಲೇರಿ ಒಂಬತ್ತನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ವಾರ ಅರ್ಧಶತಕ ಸಿಡಿಸಿದ್ದ ದಕ್ಷಿಣ ಆಫ್ರಿಕಾದ ತಾಜ್ಮೀನ್ ಬ್ರಿಟ್ಸ್ 10 ಸ್ಥಾನ ಮೇಲೇರಿ 18ನೇ ಸ್ಥಾನಕ್ಕೆ ತಲುಪಿದ್ದಾರೆ.
ವೆಸ್ಟ್ ಇಂಡೀಸ್ ನಾಯಕ ಹೇಲಿ ಮ್ಯಾಥ್ಯೂಸ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನ ಮೇಲೇರಿ 22ನೇ ಸ್ಥಾನಕ್ಕೆ ತಲುಪಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಒಂದೇ ಒಂದು ಬದಲಾವಣೆಯಾಗಿದೆ. ಆಸ್ಟ್ರೇಲಿಯದ ಆಲಿಸ್ ಪ್ಯಾರಿ ದೇಶವಾಸಿ ತಾಲಿಯಾ ಅವರನ್ನು ಬಿಟ್ಟು 10ನೇ ಸ್ಥಾನಕ್ಕೆ ತಲುಪಿದ್ದಾರೆ. ವನಿತೆಯರ ಟಿ20 ವಿಶ್ವಕಪ್ ಫೆಬ್ರವರಿ 10 ರಿಂದ 26ರ ವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದು, ಇದರಲ್ಲಿನ ಆಟ ಎಲ್ಲರ ಶ್ರೇಯಾಂಕವನ್ನು ಅಡಿಮೇಲು ಮಾಡಲಿದೆ.
ಇದನ್ನೂ ಓದಿ:ಟಾಪ್ ಮೂವರು ಆಟಗಾರರೇ ಭಾರತಕ್ಕೆ ಸಮಸ್ಯೆ, ಕೊನೆಯ ಪಂದ್ಯದಲ್ಲಿದೆಯೇ ಶಾಗೆ ಎಂಟ್ರಿ?