ರಾಜ್ಕೋಟ್ (ಗುಜರಾತ್):ದೀಪಕ್ ಹೂಡಾ ಅವರ ಅದ್ಭುತ ಶತಕದ ನೆರವಿನಿಂದ ರಾಜಸ್ಥಾನವು ಕರ್ನಾಟಕವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. 128 ಎಸೆತಗಳಲ್ಲಿ ಹೂಡಾ ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ ಐದು ಸಿಕ್ಸರ್‌ಗಳನ್ನು ಸಿಡಿಸಿ 180 ರನ್ ಕಲೆ ಹಾಕಿದರು. ಕರಣ್ ಲಂಬಾ ಔಟಾಗದೇ 73 ರನ್ ಗಳಿಸಿದ್ದರಿಂದ ನಾಲ್ಕನೇ ವಿಕೆಟ್‌ಗೆ 255 ರನ್‌ಗಳ ಜೊತೆಯಾಟ ಆಡಿದರು.
ಫೈನಲ್ನಲ್ಲಿ ರಾಜಸ್ಥಾನ- ಹರಿಯಾಣ ಮುಖಾಮುಖಿ:ನಾಳೆ (ಶನಿವಾರ) ನಡೆಯಲಿರುವ ಫೈನಲ್ನಲ್ಲಿ ಹರಿಯಾಣ ವಿರುದ್ಧ ರಾಜಸ್ಥಾನ ಅಖಾಡಕ್ಕೆ ಇಳಿಯಲಿದೆ. ಎರಡು ಹಿಂದೆ ನಡೆದ ಸಮಿಫೈನಲ್ ಪಂದ್ಯದಲ್ಲಿ ಹರಿಯಾಣವು ಐದು ಬಾರಿ ಚಾಂಪಿಯನ್ ತಮಿಳುನಾಡನ್ನು 63 ರನ್‌ಗಳಿಂದ ಮಣಿಸುವ ಮೂಲಕ ಮೊದಲ ಬಾರಿಗೆ ಪಂದ್ಯಾವಳಿಯ ಫೈನಲ್‌ಗೆ ಪ್ರವೇಶಿಸಿತ್ತು. ನಿನ್ನೆ ಮ್ಯಾಚ್ನಲ್ಲಿ ಓಪನರ್ ರಾಮ್ ಚೌಹಾಣ್ ಔಟಾದ ನಂತರ ಎರಡನೇ ಓವರ್‌ನಲ್ಲಿ ಬಂದ ದೀಪಕ್ ಹೂಡಾ ಆರಂಭದಲ್ಲಿ ಅತ್ಯಂತ ಎಚ್ಚರಿಕೆಯ ಆಟವಾಡಿದರು. ಎರಡಂಕಿ ತಲುಪಲು ಅವರು 23 ಎಸೆತಗಳನ್ನು ತೆಗೆದುಕೊಂಡರು. ಲಂಬಾ ಬಂದ ನಂತರ ದೀಪಕ್ ಬ್ಯಾಟಿಂಗ್ ವೈಖರಿಯನ್ನೇ ಬದಲಾಯಿಸಿದರು.
ಮೊದಲಿಗೆ ಕರಣ್ ಲಂಬಾ ಆಕ್ರಮಣಕಾರಿ ಆಟ ಆರಂಭಿದರು. ನಂತರ ದೀಪಕ್ ಹೂಡಾ ಅಬ್ಬರದ ಬ್ಯಾಟಿಂಗ್ ಶುರು ಮಾಡಿದರು. ಹೂಡಾ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರದ 33 ಎಸೆತಗಳಲ್ಲಿ (ಒಟ್ಟು 85 ಎಸೆತಗಳಲ್ಲಿ) ತಮ್ಮ ಶತಕ ಪೂರೈಸಿದರು. ಅದೇ ಧಾಟಿಯಲ್ಲಿ ಮುಂದುವರಿದ ಹೂಡಾ 38ನೇ ಓವರ್‌ನಲ್ಲಿ ಬೌಂಡರಿಯೊಂದಿಗೆ 150 ರನ್ ಗಳಿಸಿದರು. ಅಲ್ಲಿಗೆ ತಲುಪಲು ಅವರು 108 ಎಸೆತಗಳನ್ನು ತೆಗೆದುಕೊಂಡರು. 40ನೇ ಓವರ್‌ನ ಅಂತ್ಯಕ್ಕೆ ರಾಜಸ್ಥಾನ 3 ವಿಕೆಟ್‌ಗೆ 260 ರನ್ ಗಳಿಸಿತ್ತು. ಮತ್ತು ಕೊನೆಯ 10 ಓವರ್‌ಗಳಲ್ಲಿ ಕೇವಲ 17 ರನ್‌ಗಳ ಅಗತ್ಯವಿದ್ದ ಕಾರಣ ಅವರ ಗೆಲುವು ಖಚಿತವಾಗಿತ್ತು. ಪಂದ್ಯ ಜಯ ಗಳಿಸಲು ಕೇವಲ ಐದು ರನ್‌ಗಳ ಬೇಕಿದ್ದಾಗ ಹೂಡಾ ಔಟಾದರು.
ಇನ್ನೂ ಕರ್ನಾಟಕದ ಪರ ವಾಸುಕಿ ಕೌಶಿಕ್, ವಿಜಯ್‌ಕುಮಾರ್ ವೈಶಾಕ್ ಮತ್ತು ಮನೋಜ್ ಭಾಂಡಗೆ ತಲಾ ಒಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಅಭಿನವ್ ಮನೋಹರ್ ಅವರ 91 ರನ್ ಮತ್ತು ಮನೋಜ್ ಅವರ 63 ರನ್‌ಗಳ ನೆರವಿನಿಂದ ಕರ್ನಾಟಕ 8 ವಿಕೆಟ್‌ಗೆ 282 ರನ್ ಗಳಿಸಿತ್ತು. ರಾಜಸ್ಥಾನ ಪರ ಅನಿಕೇತ್ ಚೌಧರಿ ಮತ್ತು ಕುಕ್ನಾ ಅಜಯ್ ಸಿಂಗ್ ತಲಾ ಎರಡು ವಿಕೆಟ್ ಪಡೆದರು.
ರಾಣಾ ಶತಕದ ನೆರವಿನಿಂದ ಫೈನಲ್ ತಲುಪಿದ ಹರಿಯಾಣ:ಹರಿಯಾಣ ನಾಯಕ ಅಶೋಕ್ ಮೆನಾರಿಯಾ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ತಂಡದ ಪರ ಹಿಮಾಂಶು ರಾಣಾ 116 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. 118 ಎಸೆತಗಳನ್ನು ಎದುರಿಸಿದ ಅವರು 11 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೊತೆಗೆ ಆರಂಭಿಕ ಆಟಗಾರ ಯುವರಾಜ್ ಸಿಂಗ್ ಕೂಡ ಅರ್ಧಶತಕ ಗಳಿಸಿದ್ದರು. ಅವರು 79 ಎಸೆತಗಳಲ್ಲಿ 65 ರನ್ ಗಳಿಸಿದ್ದರು. ಯುವರಾಜ್ ಏಳು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದರು. ಕೊನೆಯ ಓವರ್‌ಗಳಲ್ಲಿ ಸುಮಿತ್ ಕುಮಾರ್ 30 ಎಸೆತಗಳಲ್ಲಿ 48 ರನ್ ಗಳಿಸಿದ್ದರು. ಹರಿಯಾಣ 50 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 293 ರನ್ ಗಳಿಸಿತ್ತು. ತಮಿಳುನಾಡು ಪರ ವೇಗಿ ಟಿ ನಟರಾಜನ್ ಗರಿಷ್ಠ ಮೂರು ವಿಕೆಟ್ ಪಡೆದರು. ವರುಣ್ ಚಕ್ರವರ್ತಿ ಮತ್ತು ಸಾಯಿ ಕಿಶೋರ್ ತಲಾ ಎರಡು ವಿಕೆಟ್ ಪಡೆದುಕೊಂಡಿದ್ದರು.
ನಂತರ, ತಮಿಳುನಾಡು ತಂಡ 47.1 ಓವರ್‌ಗಳಲ್ಲಿ 230 ರನ್ ಗಳಿಸಿ ಸೋಲನುಭವಿಸಿತ್ತು. ಬಾಬಾ ಇಂದ್ರಜಿತ್ ತಮಿಳುನಾಡು ಪರ 71 ಎಸೆತಗಳಲ್ಲಿ ಗರಿಷ್ಠ 64 ರನ್ ಗಳಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿಗಳನ್ನು ಬಾರಿಸಿದ್ದಾರೆ. ನಾಯಕ ದಿನೇಶ್ ಕಾರ್ತಿಕ್ (31 ರನ್), ನಾರಾಯಣ್ ಜಗದೀಶನ್ (30 ರನ್) ಮತ್ತು ಸಾಯಿ ಕಿಶೋರ್ (29 ರನ್) ಮಾತ್ರ ಹರಿಯಾಣದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಹರಿಯಾಣ ಪರ ಅನ್ಶುಲ್ ಕಾಂಬೋಜ್ ಗರಿಷ್ಠ ನಾಲ್ಕು ವಿಕೆಟ್ ಹಾಗೂ ರಾಹುಲ್ ತೆವಾಟಿಯಾ ಎರಡು ವಿಕೆಟ್ ಪಡೆದಿದ್ದರು.
ಇದನ್ನೂ ಓದಿ:ಏಕೈಕ ಟೆಸ್ಟ್ : ಶುಭಾ, ಜೆಮಿಮಾ, ಯಸ್ತಿಕಾ, ದೀಪ್ತಿ ಅರ್ಧಶತಕ; ಇಂಗ್ಲೆಂಡ್ ವಿರುದ್ಧ ಭಾರತ 410/7