ಹರಾರೆ(ಜಿಂಬಾಬ್ವೆ):ಹರಾರೆ ಸ್ಪೋರ್ಟ್ಸ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ ಜಿಂಬಾಬ್ವೆ ವಿರುದ್ಧ ಸರಣಿ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ದೀಪಕ್ ಹೂಡಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಭಾರತದ ಪಾಲಿಗೆ ಅದೃಷ್ಟ ಎಂಬುದನ್ನ ಸಾಬೀತುಪಡಿಸಿದ್ದಾರೆ.
ಟೀಂ ಇಂಡಿಯಾ ಪರ ದೀಪಕ್ ಹೂಡಾ ಇಲ್ಲಿಯವರೆಗೆ 16 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಭಾರತ ಸೋಲು ಕಂಡಿಲ್ಲ. ಶನಿವಾರ ನಡೆದ ಪಂದ್ಯದಲ್ಲೂ ಇದು ಸಾಭೀತಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ದೀಪಕ್ ಒಟ್ಟು 16 ಪಂದ್ಯಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದಾರೆ. ಇದರಲ್ಲಿ ಏಳು ಏಕದಿನ ಹಾಗೂ 9 ಟಿ20 ಪಂದ್ಯಗಳು ಸೇರಿವೆ. ಈ ಎಲ್ಲಾ ಪಂದ್ಯಗಳಲ್ಲೂ ಭಾರತ ಗೆಲುವಿನ ನಗೆ ಬೀರಿದೆ.
ರೊಮೆನಿಯಾದ ಸಾತ್ವಿಕ್ ನದಿಗೋತ್ಲಾ ಕೂಡ ರೊಮೇನಿಯಾ ಪರ ಪದಾರ್ಪಣೆ ಮಾಡಿದ ಬಳಿಕ ಸತತ 15 ಪಂದ್ಯ ಗೆದ್ದ ದಾಖಲೆ ಹೊಂದಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ದೀಪಕ್ ಹೂಡಾ ಈ ದಾಖಲೆ ಬ್ರೇಕ್ ಮಾಡಿದ್ದಾರೆ. ಟೀಂ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಜಾಗಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ದೀಪಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 1 ವಿಕೆಟ್ ಪಡೆದುಕೊಂಡ ಅವರು, 25ರನ್ಗಳಿಸಿದ್ದಾರೆ.