ಕರ್ನಾಟಕ

karnataka

ETV Bharat / sports

ದೀಪಕ್‌ ಚಹಾರ್‌ 'ನಿನಗೆ ಕ್ರಿಕೆಟ್‌ ಆಗಿಬರೋಲ್ಲ, ಬೇರೆ ಕೆಲಸವಿದ್ದರೆ ನೋಡಿಕೋ' ಎಂದಿದ್ದರಂತೆ ಗ್ರೆಗ್ ಚಾಪೆಲ್‌! - ವೆಂಕಟೇಶ್ ಪ್ರಸಾದ್​

ತಿರಸ್ಕಾರದಿಂದ ಕುಗ್ಗದೆ ಪುಟಿದೇಳುವ ಛಲವಿರಬೇಕು.. ಪುರಸ್ಕಾರದಿಂದ ಮತ್ತಷ್ಟು ಸಾಧನೆಗೆ ಪ್ರೇರಣೆ ಸಿಗಬೇಕು. ಈ ಮಾತು ನಿನ್ನೆ ಶ್ರೀಲಂಕಾ ಎದುರು ಭಾರತವನ್ನು ಗೆಲ್ಲಿಸಿಕೊಟ್ಟು ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಮನಸ್ಸು ಗೆದ್ದ ದೀಪಕ್‌ ಚಹಾರ್‌ ಅವರಿಗೆ ಸೂಕ್ತ ರೀತಿಯಲ್ಲಿ ಅನ್ವಯವಾಗುತ್ತದೆ. ಇದಕ್ಕೆ ಬಲವಾದ ಕಾರಣವಿದೆ. ನಿಮಗೆ ಗ್ರೆಗ್‌ ಚಾಪೆಲ್‌ ಗೊತ್ತಿರಬಹುದು. ಈ ಹಿಂದೆ ಭಾರತ ಕ್ರಿಕೆಟ್‌ ತಂಡಕ್ಕೆ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ. ಇವರನ್ನು ವಿವಾದಿತ ಕೋಚ್‌ ಅಂದರೂ ತಪ್ಪಲ್ಲ. ಇದೇ ಚಾಪೆಲ್‌ ಅವರಿಂದ, ದೀಪಕ್‌ ಚಹಾರ್‌ ತೀವ್ರವಾಗಿ ಅವಮಾನಕ್ಕೊಳಗಾಗಿದ್ದರು. ಅದ್ಯಾವ ಮಟ್ಟಿಗೆ ಅಂದರೆ ಆತ, 'ನಿನಗೆ ಕ್ರಿಕೆಟ್‌ ಆಗಿ ಬರೋಲ್ಲ, ಬೇರೆ ಕೆಲಸ ನೋಡಿಕೋ ಎಂದಿದ್ದರಂತೆ. ಆದ್ರೆ ಅದೇ ದೀಪಕ್‌ ಚಹಾರ್ ನಿನ್ನೆ ಪಂದ್ಯದ ಕೊನೆಯ ಹಂತದವರೆಗೂ ಹೋರಾಡಿ ವಿಜಯದ ರೂವಾರಿಯಾದರು. ಇದಕ್ಕೆ ಹೇಳೋದಲ್ವೇ, ವ್ಯಕ್ತಿಗೆ ಸ್ವಂತ ಶಕ್ತಿಯ ಮೇಲೆ ಅಚಲವಾದ ನಂಬಿಕೆ ಇರಬೇಕು ಅಂತ.

Deepak chahar
ದೀಪಕ್ ಚಹಾರ್

By

Published : Jul 21, 2021, 7:49 PM IST

Updated : Jul 21, 2021, 8:03 PM IST

ಕೊಲಂಬೊ: ಮಂಗಳವಾರ ಶ್ರೀಲಂಕಾ ವಿರುದ್ಧ ನಡೆದ 2ನೇ ಏಕದಿನ ಪಂದ್ಯದಲ್ಲಿ ದೀಪಕ್ ಚಹಾರ್ ಆಲ್​ರೌಂಡರ್​ ಆಟದ ಮೂಲಕ ಭಾರತಕ್ಕೆ 3 ವಿಕೆಟ್​ಗಳ ರೋಚಕ ಜಯ ತಂದುಕೊಟ್ಟಿದ್ದರು. ಆದರೆ ಅವರು ಒಂದು ಕಾಲದಲ್ಲಿ ದೇಶಿ ತಂಡಕ್ಕೂ ಲಾಯಕ್ಕಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೇಗ್ ಚಾಪೆಲ್ ಕಡೆಣಿಸಿದ್ದರೆಂದು ಕನ್ನಡಿಗ ಹಾಗೂ ಭಾರತ ತಂಡದ ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್​ ನೆನಪಿಸಿದ್ದಾರೆ.

"ದೀಪಕ್ ಚಹಾರ್‌ ಎತ್ತರವಿಲ್ಲದ ಕಾರಣ ರಾಜಸ್ಥಾನ ಕ್ರಿಕೆಟ್​ ಅಸೋಸಿಯೇಷನ್​ ನಿರ್ದೇಶಕರಾಗಿದ್ದ ಗ್ರೇಗ್ ಚಾಪೆಲ್​ರಿಂದ ತಿರಸ್ಕರಿಸಿಲ್ಪಟ್ಟಿದ್ದರು. ಅಲ್ಲದೆ ಬೇರೆ ಯಾವುದಾದರೂ ಕೆಲಸ ನೋಡಿಕೋ ಎಂದು ಸಲಹೆ ನೀಡಿದ್ದರು. ಆದರೆ ಬ್ಯಾಟಿಂಗ್​ನಲ್ಲಿ ಅಷ್ಟೇನು ಅನುಭವವಿಲ್ಲದಿದ್ದರೂ ಏಕಾಂಗಿಯಾಗಿ ಶ್ರೀಲಂಕಾ ತಂಡವನ್ನು ಮಣಿಸಲು ನೆರವಾಗಿದ್ದಾರೆ" ಎಂದು ವೆಂಕಟೇಶ್ ಪ್ರಸಾದ್​ ಟ್ವೀಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕಥೆಯ ನೀತಿಯೆಂದರೆ ನಿಮ್ಮ ಮೇಲೆ ನಂಬಿಕೆಯಿರಲಿ, ವಿದೇಶಿ ಕೋಚ್​ಗಳನ್ನೂ ತುಂಬಾ ಗಂಭೀರವಾಗಿ ಪರಿಗಣಿಸಬೇಡಿ ಎಂದು ಟ್ವೀಟ್ ಮೂಲಕ ಪ್ರಸಾದ್ ಸಲಹೆ ನೀಡಿದ್ದಾರೆ.

2008ರಲ್ಲಿ ನಡೆದಿದ್ದೇನು?:

2008ರಲ್ಲಿ ರಾಜಸ್ಥಾನ ಕ್ರಿಕೆಟ್​ ಅಸೋಸಿಯೇಷನ್​ ನಿರ್ದೇಶಕರಾಗಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ಹಾಗೂ ಭಾರತ ತಂಡದ ಮಾಜಿ ಕೋಚ್​ ಗ್ರೇಗ್​​ ಚಾಪೆಲ್​ ಚಹಾರ್​ರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲಿಂಗ್​ ಮಾಡುವಷ್ಟು ಸಾಮರ್ಥ್ಯವಿಲ್ಲ ಎಂದು ಭಾವಿಸಿ ಆತನಿಗೆ ರಾಜಸ್ಥಾನ ತಂಡದಲ್ಲಿ ಅವಕಾಶವಿಲ್ಲದಂತೆ ಮಾಡಿದ್ದರಂತೆ. ಆದ್ರೆ ಚಹಾರ್​ 2 ವರ್ಷದ ನಂತರ ರಾಜಸ್ಥಾನ ತಂಡದ ಪರ ರಣಜಿಗೆ ಪಾದಾರ್ಪಣೆ ಮಾಡಿ ಹೈದರಾಬಾದ್​ ವಿರುದ್ಧ 8 ವಿಕೆಟ್​ ಪಡೆದು ಚಾಪೆಲ್​ ಟೀಕೆಗೆ ತಕ್ಕ ಉತ್ತರ ನೀಡಿದ್ದರು.

ನಂತರ ಗಾಯದ ಸಮಸ್ಯೆಯಿಂದ ಬಳಲಿ ತಂಡದಿಂದ ಹೊರಬಿದ್ದರೂ ಚಹಾರ್​ ಛಲಬಿಡದೆ ಮತ್ತೆ ರಾಜಸ್ಥಾನದ ಖಾಯಂ ಆಟಗಾರನಾದರು. ದೇಶಿ ಟಿ20 ಲೀಗ್​ ಆದ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದರು.

ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಗಮನ ಸೆಳೆದಿದ್ದರಿಂದ ಸಿಎಸ್​ಕೆ 80 ಲಕ್ಷ ರೂಗೆ ಚಹಾರ್​ರನ್ನು ಖರೀದಿಸಿತ್ತು. ಅಲ್ಲಿ ನಾಯಕರಾಗಿದ್ದ ಧೋನಿ ನಿಜಕ್ಕೂ ಚಹಾರ್​​ ಪಾಲಿಗೆ ಗಾಡ್​ ಫಾದರ್​ ಆದ್ರು.

ಚಹಾರ್​ ಬೌಲಿಂಗ್​ ಶೈಲಿ ಗಮನಿಸಿದ ಧೋನಿ ಆತನನ್ನು ಓಪನಿಂಗ್​ ಬೌಲಿಂಗ್​ಗೆ ಸಿದ್ಧಪಡಿಸಿದರು. ಸ್ವಿಂಗ್​ ಬೌಲಿಂಗ್​ನಲ್ಲಿ ಕೌಶಲ್ಯವಿರುವ ಚಹಾರ್​ 2018ರ ಸೀಸನ್​ನಲ್ಲಿ 10 ವಿಕೆಟ್​ ಪಡೆದು ಚಾಂಪಿಯನ್​ ತಂಡದ ಭಾಗವಾದರು. ನಂತರ 2019ರ ಸೀಸನ್​ನಲ್ಲೂ 22 ವಿಕೆಟ್​ ಪಡೆದರಲ್ಲದೆ ಭಾರತ ಟಿ20 ತಂಡದ ಖಾಯಂ ಬೌಲರ್​ ಆಗಿ ಆಯ್ಕೆಯಾಗಿದ್ದಾರೆ. ಇದೀಗ ಏಕದಿನ ತಂಡದಲ್ಲೂ ಚಾಪು ಮೂಡಿಸುವ ಮೂಲಕ ತಾವೊಬ್ಬ ಆಲ್​ರೌಂಡರ್​ ಕೂಡ ಎಂದು ಕ್ರಿಕೆಟ್​ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಚಾಪೆಲ್ ಕೈಬಿಟ್ರು, ಧೋನಿ ಕೈಹಿಡಿದು ಮೇಲೆತ್ತಿದ್ರು... ಹ್ಯಾಟ್ರಿಕ್​ ವೀರನ​ ರೋಚಕ ಕಥೆ!

Last Updated : Jul 21, 2021, 8:03 PM IST

ABOUT THE AUTHOR

...view details