ಮುಂಬೈ(ಮಹಾರಾಷ್ಟ್ರ): 2023ರಲ್ಲಿ ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ನಡೆಯಿತು. ಪುರುಷರ ಐಪಿಎಲ್ ರೀತಿಯ ಜನಮನ್ನಣೆ ಪಡೆಯದಿದ್ದರೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಎರಡನೇ ಸೀಸನ್ಗೆ ಬಿಸಿಸಿಐ ತಯಾರಿ ಆರಂಭಿಸಿದ್ದು, ನಾಳೆ ಹರಾಜು ಪ್ರಕ್ರಿಯೆ ನಿಗದಿಯಾಗಿದೆ.
165 ಆಟಗಾರ್ತಿಯರು ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಹರಾಜು ಪಟ್ಟಿಯಲ್ಲಿ 104 ಭಾರತೀಯರು ಮತ್ತು 61 ವಿದೇಶಿಯರಿದ್ದಾರೆ. 21 ವಿದೇಶಿ ಕ್ರಿಕೆಟಿಗರು ಸೇರಿದಂತೆ 60 ಆಟಗಾರ್ತಿಯರನ್ನು ಐದು ಫ್ರಾಂಚೈಸಿಗಳು ಉಳಿಸಿಕೊಂಡಿವೆ. 29 ಆಟಗಾರ್ತಿಯರನ್ನು ತಂಡಗಳು ಕೈಬಿಟ್ಟಿವೆ. ಪ್ರಸ್ತುತ ಹರಾಜಿನಲ್ಲಿ ಐದು ತಂಡಗಳಿಂದ ಒಟ್ಟು 30 ಸ್ಥಾನ ಖಾಲಿ ಇದ್ದು, ಇದರಲ್ಲಿ 9 ವಿದೇಶಿಯರಿದ್ದಾರೆ.
ಹರಾಜಿನಲ್ಲಿ ಹೆಚ್ಚಿನ ಮೂಲ ಬೆಲೆ ಹೊಂದಿರುವುದು ಕೇವಲ ಇಬ್ಬರು ಆಟಗಾರ್ತಿಯರು. ವೆಸ್ಟ್ ಇಂಡೀಸ್‌ನ ಡಿಯಾಂಡ್ರಾ ಡಾಟಿನ್ ಮತ್ತು ಆಸ್ಟ್ರೇಲಿಯಾದ ಕಿಮ್ ಗಾರ್ತ್ 50 ಲಕ್ಷ ರೂ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ.
ಐದು ಫ್ರಾಂಚೈಸಿಗಳ ಪೈಕಿ ಗುಜರಾತ್ ಜೈಂಟ್ಸ್ ಹೆಚ್ಚಿನ ಹಣ ಹೊಂದಿದೆ. ಹೆಚ್ಚಿನ ಆಟಗಾರರೂ ಸಹ ತಂಡಕ್ಕೆ ಬೇಕಾಗಿದ್ದಾರೆ. ಗುಜರಾತ್ ಜೈಂಟ್ಸ್ 5.95 ಕೋಟಿ, ಯುಪಿ ವಾರಿಯರ್ಸ್ 4 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 3.35 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ 2.25 ಕೋಟಿ ಮತ್ತು ಮುಂಬೈ ಇಂಡಿಯನ್ಸ್ 2.10 ಕೋಟಿ ಹಣ ಹೊಂದಿದೆ. ಜಿಟಿಗೆ 10, ಆರ್ಸಿಬಿಗೆ 7, ಮುಂಬೈ, ಯುಪಿಗೆ ತಲಾ 5 ಮತ್ತು ಡೆಲ್ಲಿ 3 ಆಟಗಾರ್ತಿಯರ ಅಗತ್ಯವಿದೆ.