ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ದೆಹಲಿ ಮಹಿಳಾ ಆಯೋಗ ಮಂಗಳವಾರ ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.
ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಕಂಡಿದ್ದಕ್ಕೆ ಹಾಗೂ ಮೊಹಮ್ಮದ್ ಶಮಿ ವಿರುದ್ಧ ಧರ್ಮದ ಆಧಾರದ ಮೇಲೆ ಟೀಕಿಸುವವರ ವಿರುದ್ಧ ಕೊಹ್ಲಿ ಮಾತನಾಡಿದ್ದಕ್ಕೆ ಅವರ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದರು. 9 ತಿಂಗಳ ಮುಗ್ಧ ಮಗುವಿಗೆ ಬೆದರಿಯೊಡ್ಡಿರುವುದು ಅವಮಾನಕರ ಸಂಗತಿ ಎಂದಿರುವ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಳಿವಾಲ್, ಟ್ವೀಟ್ ಮೂಲಕ ದೆಹಲಿ ಪೊಲೀಸರಿಗೆ ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಕೈಗೊಂಡಿರುವ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಸೂಚಿಸಿದ್ದಾರೆ.
"ಭಾರತ ತಂಡ ಸಾವಿರಾರು ಬಾರಿ ದೇಶ ಹೆಮ್ಮೆಪಡುವಂತೆ ಮಾಡಿದೆ. ಆದರೆ ಕೇವಲ ಒಂದು ಸೋಲಿಗೆ ಇಂತಹ ಮೂರ್ಖತನದ ಪ್ರದರ್ಶನವೇಕೆ?" ಎಂದು ಸ್ವಾತಿ ಮಾಳಿವಾಲ್ ಖಾರವಾಗಿ ಪ್ರಶ್ನಿಸಿದರು.