ಬೆಂಗಳೂರು:23 ವರ್ಷಗಳ ಬಳಿಕ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿರುವ ಮಧ್ಯಪ್ರದೇಶ 41 ಬಾರಿಯ ಚಾಂಪಿಯನ್ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಟ್ರೋಫಿ ಎತ್ತಿ ಹಿಡಿಯಲು ಇನ್ನೊಂದೇ ದಿನ ಬಾಕಿಯಿದೆ. ಕಾರಣ ಮಧ್ಯಪ್ರದೇಶ ತಂಡ ಇನಿಂಗ್ಸ್ ಮುನ್ನಡೆ ಪಡೆದಿದ್ದು, ನಾಳೆಯ ಕೊನೆಯ ದಿನದಾಟದಲ್ಲಿ ಪಂದ್ಯ ಡ್ರಾ ಆದರೂ, ಟ್ರೋಫಿ ಮಧ್ಯಪ್ರದೇಶದ ವಶವಾಗಲಿದೆ.
ಇನ್ನು ಇಂದಿನ 4ನೇ ದಿನದಾಟದ ಮೂರನೇ ಅವಧಿಯಲ್ಲಿ 2ನೇ ಇನಿಂಗ್ಸ್ ಆರಂಭಿಸಿರುವ ಮುಂಬೈ ತಂಡ 2 ವಿಕೆಟ್ ಕಳೆದುಕೊಂಡಿದ್ದು 113 ರನ್ ಗಳಿಸಿದ್ದು, 49 ರನ್ಗಳಷ್ಟು ಹಿಂದಿದೆ. ಅಲ್ಲದೇ, ಬೃಹತ್ ಮೊತ್ತವನ್ನು ದಾಖಲಿಸಿ ಮಧ್ಯಪ್ರದೇಶಕ್ಕೆ 2ನೇ ಇನಿಂಗ್ಸ್ ಆಡಲು ಆಹ್ವಾನ ನೀಡಬೇಕಿದೆ.
ರೋಚಕತೆಯತ್ತ ಸಾಗುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದ 3ನೇ ದಿನದಾಟದಲ್ಲಿ ಯಶ್ ದುಬೆ ಮತ್ತು ಶುಭಂ ಶರ್ಮಾ ಅವರ ಶತಕ ಬಲದಿಂದ ಮುಂಬೈ ವಿರುದ್ಧ ಪಾರಮ್ಯ ಮೆರೆದಿದ್ದ ಮಧ್ಯಪ್ರದೇಶ, ನಾಲ್ಕನೇ ದಿನದಾಟದಲ್ಲೂ ಮೇಲುಗೈ ಸಾಧಿಸಿತು.
ರಜತ್ ಪಾಟೀದಾರ್ ಶತಕ:ಐಪಿಎಲ್ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪರ ಮಿಂಚಿದ್ದ ರಜತ್ ಪಾಟೀದಾರ್ ಇಂದು ಶತಕ ಸಾಧನೆ ಮಾಡಿದರು. 122 ರನ್ ಗಳಿಸಿದ ಪಾಟೀದಾರ್ ಮುನ್ನಡೆಯನ್ನು ಇನ್ನಷ್ಟು ಹಿಗ್ಗಿಸಿದರು. ಬೌಲಿಂಗ್ನಲ್ಲಿ 2 ವಿಕೆಟ್ ಪಡೆದು ಮಿಂಚಿದ್ದ ಸರನ್ಶಾ ಜೈನ್ (57ರನ್) ಬ್ಯಾಟಿಂಗ್ನಲ್ಲೂ ಮಿಂಚಿ ಅರ್ಧಶತಕ ಸಿಡಿಸಿದರು.
ನಾಯಕ ಆದಿತ್ಯ ಶ್ರೀವಾಸ್ತವ್ 25 ರನ್ ಗಳಿಸಿ ಔಟಾದರು. ಉಳಿದ ಆಟಗಾರರು ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾದ ಕಾರಣ ಮಧ್ಯಪ್ರದೇಶ 536 ರನ್ಗಳಿಗೆ ಔಟಾಗಿ 162 ರನ್ಗಳ ಮುನ್ನಡೆ ಪಡೆಯಿತು.