ಸಿಡ್ನಿ(ಆಸ್ಟ್ರೇಲಿಯಾ):ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂಬುದು ಹಳೆಯ ವಿಷಯ. ಆದರೆ ಇದೀಗ ಹೊಸ ವರ್ಷದಂದು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದು, ಏಕದಿನ ಕ್ರಿಕೆಟ್ಗೂ ನಿವೃತ್ತಿ ಪ್ರಕಟಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದ ವಾರ್ನರ್, ಆಸೀಸ್ಗೆ ಉತ್ತಮ ಆರಂಭ ನೀಡಿದ್ದರು. ತಂಡವು ಭಾರತದೆದುರು ವಿಶ್ವಕಪ್ ಗೆದ್ದು ಬೀಗಿತ್ತು. ಈ ಸ್ಮರಣೀಯ ಸಾಧನೆಯ ನಂತರ ಒನ್ ಡೇ ಮಾದರಿಯಿಂದಲೂ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯ ವೇಳೆ ಅಗತ್ಯಬಿದ್ದರೆ ತಂಡಕ್ಕಾಗಿ ಆಡುವೆ ಎಂದು ತಿಳಿಸಿದ್ದಾರೆ.
"ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದುತ್ತಿದ್ದೇನೆ. ಭಾರತದಲ್ಲಿ ಏಕದಿನ ವಿಶ್ವಕಪ್ ಗೆಲುವು ದೊಡ್ಡ ಸಾಧನೆ. ಇದಾದ ನಂತರ ನಾನು ಈ ನಿರ್ಧಾರಕ್ಕೆ ಬಂದೆ. ಇಂದು ಏಕದಿನ ಮಾದರಿಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸುತ್ತಿದ್ದೇನೆ. ಇದರಿಂದ ನಾನು ಪ್ರಪಂಚಾದ್ಯಂತ ಲೀಗ್‌ಗಳಲ್ಲಿ ಆಡುವ ಅವಕಾಶ ಪಡೆಯುತ್ತೇನೆ. ಮುಂದೆ ಚಾಂಪಿಯನ್ಸ್ ಟ್ರೋಫಿ ಇರುವುದು ನನಗೆ ಅರಿವಿದೆ. ನಾನು ತಂಡದ ಜೊತೆಗಿರುತ್ತೇನೆ. ನನ್ನ ಅವಶ್ಯಕತೆ ಇದ್ದರೆ ತಂಡವನ್ನು ಸೇರಲು ಸದಾ ಲಭ್ಯವಿರುತ್ತೇನೆ"ಎಂದು ಸೋಮವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೇಳಿದರು.