ಸಿಡ್ನಿ (ಆಸ್ಟ್ರೇಲಿಯಾ): ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಮೈದಾನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ಗೆ ಬಂದಿಳಿರುವ ವಾರ್ನರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಬಳಿಕ ನ್ಯೂ ಸೌತ್ ವೇಲ್ಸ್‌ನ ಹಂಟರ್ ವ್ಯಾಲಿಯಲ್ಲಿ ತಮ್ಮ ಸಹೋದರನ ಮದುವೆಯಲ್ಲಿ ಅವರು ಭಾಗವಹಿಸಿದ್ದರು. ಶುಕ್ರವಾರ ಬಿಗ್ ಬ್ಯಾಷ್ ಲೀಗ್ನ ಸಿಡ್ನಿ ಥಂಡರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ತಮ್ಮ ತವರು ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಸ್ಟಾರ್ ಬ್ಯಾಟರ್ ಕ್ರಿಕೆಟ್ ಗ್ರೌಂಡ್ನಲ್ಲಿ ಬಂದಿಳಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
37 ವರ್ಷದ ಎಡಗೈ ಬ್ಯಾಟರ್ ವಾರ್ನರ್ ಏಕದಿನ, ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಟಿ-20 ಮತ್ತು ಫ್ರಾಂಚೈಸ್ ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದಾಗ್ಯೂ, ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಚಾಂಪಿಯನ್ಸ್ ಟ್ರೋಫಿ - 2025ರ ಟೂರ್ನಿಯನ್ನೂ ಆಡಲಿದ್ದಾರೆ.