ಮೆಲ್ಬೋರ್ನ್:100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 10ನೇ ಆಟಗಾರ, ದ್ವಿಶತಕ ಸಿಡಿಸಿದ ವಿಶ್ವದ 2ನೇ ಪ್ಲೇಯರ್, 8 ಸಾವಿರ ರನ್ ಗಳಿಸಿದ ಆಸೀಸ್ನ 8ನೇ ಆಟಗಾರ..! ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ದಾಖಲೆಗಳ ಮೇಲೆ ದಾಖಲೆ ಬರೆದರು.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಡೇವಿಡ್ ವಾರ್ನರ್ರ ಐತಿಹಾಸಿಕ ಆಟಕ್ಕೆ ಸಾಕ್ಷಿಯಾಯಿತು. ಆಸೀಸ್ ಆರಂಭಿಕ ಬ್ಯಾಟರ್ಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ. 3 ವರ್ಷಗಳಿಂದ ಶತಕದ ಬರ ಅನುಭವಿಸುತ್ತಿರುವ ವಾರ್ನರ್, ಕೊನೆಗೂ ತಮ್ಮ ವಿಶೇಷ ಪಂದ್ಯದಂದು ಐತಿಹಾಸಿಕ ದಾಖಲೆ ಬರೆದರು. ವಾರ್ನರ್ ಕೊನೆಯ ಬಾರಿ ಅಂದರೆ 2020 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 111* ಗಳಿಸಿದ್ದೇ ಕೊನೆಯ ಹಂಡ್ರೆಡ್ ಆಗಿತ್ತು.
ನೂರನೇ ಪಂದ್ಯದಲ್ಲಿ 200 ರನ್:ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎಂಬ ಖ್ಯಾತಿಗೆ ವಾರ್ನರ್ ಪಾತ್ರರಾದರು. ಇದಕ್ಕೂ ಮೊದಲು ಇಂಗ್ಲೆಂಡ್‌ನ ಜೋ ರೂಟ್ ತಮ್ಮ 100 ನೇ ಪಂದ್ಯದಲ್ಲಿ 200 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಆಸೀಸ್ ಆರಂಭಿಕ ಆಟಗಾರ 254 ಎಸೆತಗಳಲ್ಲಿ ಬರೋಬ್ಬರಿ 200 ರನ್ ಗಳಿಸಿದರು. ಈ ವೇಳೆ ಸ್ನಾಯುಸೆಳೆತಕ್ಕೀಡಾಗಿ ಮೈದಾನದಿಂದ ಹೊರನಡೆದರು.