ದುಬೈ(ಯುಎಇ):ರಾಜಕೀಯ ಅರಾಜಕತೆ, ಆರ್ಥಿಕ ಬಿಕ್ಕಟ್ಟಿನ ನಡುವೆ ಅಮೋಘ ಪ್ರದರ್ಶನ ನೀಡಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಷ್ಯಾ ಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನದ ವಿರುದ್ಧ 23 ರನ್ಗಳ ರೋಚಕ ಜಯ ಸಾಧಿಸಿ 6ನೇ ಸಲ ಪ್ರಶಸ್ತಿಗೆ ಮುತ್ತಿಕ್ಕಿತು.
ಪಂದ್ಯದ ಬಳಿಕ ಮಾತನಾಡಿರುವ ಕ್ಯಾಪ್ಟನ್ ದಾಸುನ್ ಶನಕ, ಏಷ್ಯಾ ಕಪ್ ಗೆಲುವನ್ನು ಆರ್ಥಿಕ ಬಿಕ್ಕಟ್ಟು ಪೀಡಿತ ನಮ್ಮ ದೇಶ ಶ್ರೀಲಂಕಾಗೆ ಅರ್ಪಿಸುತ್ತೇವೆ. ಈ ವಿಜಯೋತ್ಸವ ದೇಶದ ಕ್ರಿಕೆಟ್‌ಗೆ ನೈಜ ತಿರುವು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಈ ಜಯಭೇರಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಆಟಗಾರರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ, ಗೆಲ್ಲುವ ಅಂಕಿ-ಅಂಶಗಳನ್ನು ಮಾತ್ರ ಕಂಡಿರಲಿಲ್ಲ. ಎಲ್ಲದರ ಫಲಿತಾಂಶವೂ ಇದೀಗ ಹೊರಬಿದ್ದಿದೆ ಎಂದರು. ಮುಂದಿನ ಐದಾರು ವರ್ಷಗಳ ಕಾಲ ಇದೇ ರೀತಿಯ ಆಟ ಮುಂದುವರೆಯಲಿದೆ ಎಂದು ಹೇಳಿದರು.