ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡ 2023ರ 16ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿತ್ತು. ತಂಡ ಇಡೀ ಲೀಗ್ನಲ್ಲಿ ಗೆದ್ದಿದ್ದು ಕೇವಲ ನಾಲ್ಕು ಪಂದ್ಯ ಮಾತ್ರ. ಕಳೆದ ವರ್ಷ ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟರ್ ಬ್ರಿಯಾನ್ ಲಾರಾ ಅವರನ್ನು ಕೋಚ್ ಆಗಿ ಹೈದರಾಬಾದ್ ನೇಮಿಸಿಕೊಂಡಿತ್ತು. ಈ ವರ್ಷ ಅವರನ್ನು ಕೈ ಬಿಟ್ಟು ನ್ಯೂಜಿಲೆಂಡ್ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರಿಗೆ ಮಣೆ ಹಾಕಿದೆ.
ವೆಟ್ಟೋರಿ ಅವರನ್ನು ಪ್ರಮುಖ ಕೋಚ್ ಆಗಿ ನೇಮಿಸಿಕೊಂಡಿರುವುದರ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ ಟ್ವಿಟರ್ ಹ್ಯಾಂಡಲ್ನಲ್ಲಿ ಟ್ವೀಟ್ ಮಾಡಿದೆ. 2014 ರಿಂದ 2018 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತರಬೇತುದಾರರಾಗಿದ್ದ ವೆಟ್ಟೋರಿ, ಐಪಿಎಲ್‌ನಲ್ಲಿ ಇದೀಗ ಎರಡನೇ ಕೋಚಿಂಗ್ ಹುದ್ದೆ ಅಲಂಕರಿಸುತ್ತಿದ್ದಾರೆ.
ವೆಟ್ಟೋರಿ ಎಸ್ಆರ್ಎಚ್ನ ನಾಲ್ಕನೇ ಕೋಚ್ ಆಗಿದ್ದಾರೆ. ಈ ಹಿಂದೆ ಹೈದರಾಬಾದ್ ತಂಡದಲ್ಲಿ 2013-2019 ಮತ್ತು 2022ರಲ್ಲಿ ಟಾಮ್ ಮೂಡಿ, 2020-2021ರಲ್ಲಿ ಟ್ರೆವರ್ ಬೇಲಿಸ್ ಮತ್ತು 2023ರಲ್ಲಿ ಲಾರಾ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಟಾಮ್ ಮೂಡಿ ಕೋಚ್ ಆಗಿದ್ದಾಗ 2016 ರಲ್ಲಿ ಹೈದರಾಬಾದ್ ಚಾಂಪಿಯನ್ ಆಗಿತ್ತು. ನಂತರ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಲೀಗ್ ಹಂತದಲ್ಲೇ ತಂಡ ಹೊರಗುಳಿಯುತ್ತಿದ್ದು, ಅಂಕಪಟ್ಟಿಯ ಟಾಪ್ ನಾಲ್ಕರ ಸ್ಥಾನ ಗಿಟ್ಟಿಸಲು ಹೆಣಗಾಡುತ್ತಿದೆ.