ನವದೆಹಲಿ:ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 2021-22ರ ಅವಧಿಗೆ ಆಟಗಾರರ ಒಪ್ಪಂದದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಲ್ರೌಂಡರ್ ಮತ್ತು ಮಾಜಿ ನಾಯಕ ಜೇಸನ್ ಹೋಲ್ಡರ್ ಮೂರು ಮಾದರಿಯಲ್ಲೂ ಅವಕಾಶ ಪಡೆದ ಏಕಮಾತ್ರ ಕ್ರಿಕೆಟಿಗರಾಗಿದ್ದಾರೆ.
ಕಳೆದ ವರ್ಷ ಎಲ್ಲ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ರಾಸ್ಟನ್ ಚೇಸ್ ಈ ವರ್ಷ ಯಾವುದೇ ಮಾದರಿಯಲ್ಲಿ ಅವಕಾಶ ಪಡೆದಿಲ್ಲ. ಇವರಷ್ಟೇ ಅಲ್ಲದೆ ಯುವ ಕ್ರಿಕೆಟಿಗ ಶಿಮ್ರಾನ್ ಹೆಟ್ಮೆಯರ್, ಒಶಾನೆ ಥಾಮಸ್, ಶೆಲ್ಡಾನ್ ಕಾಟ್ರೆಲ್, ಶೇನ್ ಡೊರಿಚ್ ಮತ್ತು ಶಮರ್ಹ್ ಬ್ರೂಕ್ಸ್ರನ್ನು ವಿಂಡೀಸ್ ಮಂಡಳಿ ತನ್ನ ಒಪ್ಪಂದದಿಂದ ಹೊರಗಿಟ್ಟಿದೆ.
ಏಪ್ರಿಲ್ 1 2020ರಿಂದ 1 ಏಪ್ರಿಲ್ 2021ರವರೆಗಿನ ಲೆಕ್ಕಾಚಾರದಲ್ಲಿ ಆದಾಯ ಕಡಿಮೆಯಾದ ನಂತರ ಈ ಆಟಗಾರರನ್ನು ಮಂಡಳಿ ಒಪ್ಪಂದಿಂದ ಕೈಬಿಟ್ಟಿದೆ. ಇನ್ನು ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ಕೈಲ್ ಮೇಯರ್ಸ್ ಮತ್ತು ಎನ್ಕ್ರುಮಾ ಬೊನ್ನರ್ ರೆಡ್ ಬಾಲ್ ಕಾಂಟ್ರ್ಯಾಕ್ಟ್ ಪಡೆದಿದ್ದಾರೆ.