ಹೈದರಾಬಾದ್: ಭಾರತದ ಕ್ರಿಕೆಟ್ ಅಭಿಮಾನಿಗಳು 10 ವರ್ಷದ ಐಸಿಸಿ ಟ್ರೋಫಿಯ ಬರ ಈ ಬಾರಿ ನೀಗುತ್ತದೆ ಎಂದು ಭಾವಿಸಿದ್ದರು. ಗೆಲುವಿನ ಕ್ಷಣವನ್ನು ಸಂಭ್ರಮಿಸಲು ಸಕಲ ಮಾನಸಿಕ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಕ್ರಿಕೆಟ್ ಪ್ರೇಮಿಗಳ ಆ ಕನಸು ನನಸಾಗಲಿಲ್ಲ. ಟ್ರೋಫಿ ಗೆಲುವಿನ ಸಂಭ್ರಮವನ್ನು ಮುಂದಿನ ಟೂರ್ನಿಗೆ ಮುಂದೂಡಬೇಕಾಗಿತು. ತವರಿನಲ್ಲೇ ನಡೆದ ವಿಶ್ವಕಪ್ನಲ್ಲಿ ತಂಡದ ಸೋಲು ಕಂಡಿದ್ದು ಕೋಟ್ಯಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
2023ರ ವಿಶ್ವಕಪ್ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರಿಂದ ಹಿಡಿದು ಅನೇಕರ ಅಭಿಪ್ರಾಯ ಆಗಿತ್ತು. ಇದಕ್ಕೆ ಕಾರಣ ತಂಡ ಸತತ 10 ಪಂದ್ಯಗಳನ್ನು ಟೂರ್ನಿಯಲ್ಲಿ ಗೆದ್ದಿರುವುದು. ಅಜೇಯವಾಗಿ ಫೈನಲ್ ತಲುಪಿದ್ದ ತಂಡ ವಿಶ್ವಕಪ್ ಉದ್ದಕ್ಕೂ ಸ್ಥಿರ ಪ್ರದರ್ಶನ ನೀಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ಬಾರದೆ 6 ವಿಕೆಟ್ಗಳ ಸೋಲನುಭವಿಸಬೇಕಾಯಿತು.
2013ರಲ್ಲಿ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ 5 ರನ್ನಿಂದ ಗೆದ್ದುಕೊಂಡಿತು. ನಂತರ ಭಾರತ ಆಡಿದ ಎಲ್ಲಾ ಐಸಿಸಿ ಟ್ರೋಫಿಗಳಲ್ಲಿ ಸೋಲನುಭವಿಸಿದೆ. ಅದರಲ್ಲೂ ಸೆಮೀಸ್ ಮತ್ತು ಫೈನಲ್ ಹಂತಕ್ಕೆ ಬಂದೇ ಎಲ್ಲಾ ಟ್ರೋಫಿಗಳನ್ನು ಕಳೆದುಕೊಂಡಿರುವುದು ವಿಪರ್ಯಾಸ.
10 ವರ್ಷಗಳಲ್ಲಿ 9 ಐಸಿಸಿ ಟ್ರೋಫಿ ಕಳೆದುಕೊಂಡ ಭಾರತ:
2014 ಟಿ20 ವಿಶ್ವಕಪ್: ಲೀಗ್ ಹಂತದಲ್ಲಿ 4 ಪಂದ್ಯಗಳನ್ನು ಗೆದ್ದಿದ್ದ ಟೀಮ್ ಇಂಡಿಯಾ ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಬಾಂಗ್ಲಾದಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ಫೈನಲ್ ಪಂದ್ಯ ನಡೆದಿತ್ತು. ಭಾರತ ನೀಡಿದ್ದ 130ರನ್ಗಳ ಗುರಿಯನ್ನು ಲಂಕನ್ನರು 2.1 ಓವರ್ ಮತ್ತು 6 ವಿಕೆಟ್ ಉಳಿಸಿಕೊಂಡು ಗೆದ್ದಿದ್ದರು.
2015ರ ಏಕದಿನ ವಿಶ್ವಕಪ್: ಈ ವಿಶ್ವಕಪ್ನಲ್ಲೂ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದದ್ದು ಸೆಮೀಸ್ನಲ್ಲಿ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಉತ್ತಮವಾಗಿ ಆಡಿದ್ದ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮೀಸ್ನಲ್ಲಿ ಎಡವಿ ಹೊರ ಬಿದ್ದಿತ್ತು. ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಭೇದಿಸಲಾಗದೇ 46.5 ಓವರ್ಗೆ 233ಕ್ಕೆ ಆಲ್ಔಟ್ ಆಗಿ, 95ರನ್ಗಳ ಸೋಲನುಭವಿಸಿತ್ತು.
2016ರ ಟಿ20 ವಿಶ್ವಕಪ್: ಲೀಗ್ ಹಂತದಲ್ಲಿ ಒಂದೇ ಒಂದು ಸೋಲು ಕಂಡು ಸೆಮೀಸ್ ಪ್ರವೇಶಿಸಿದ್ದ ತಂಡ ವೆಸ್ಟ್ ಇಂಡೀಸ್ ವಿರುದ್ಧ ಪರಾಜಯ ಕಂಡಿತು. ಭಾರತ ನೀಡಿದ್ದ 192 ರನ್ಗಳ ಗುರಿಯನ್ನು ಕೆರಿಬಿಯನ್ನರು 2 ಬಾಲ್ ಉಳಿಸಿಕೊಂಡು 7 ವಿಕೆಟ್ಗಳಿಂದ ಗೆದ್ದುಕೊಂಡರು.